ಬಿಜೆಪಿ ಏನೇ ಮಾಡಿದರೂ ಕಾಂಗ್ರೆಸ್‍ಗೆ ಬೆಂಬಲ: ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಘೋಷಣೆ
ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆ ನನ್ನ ಕ್ಷೇತ್ರಕ್ಕೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ಬೆಂಬಲಿಸುವೆ. ಅದರಂತೆ ಕಾಂಗ್ರೆಸ್ ಪರ ಕೆಲಸ ಮಾಡಲಿದ್ದು, ಬಿಜೆಪಿ ಏನು ಬೇಕಾದರೂ ಮಾಡಿಕೊಳ್ಳಲಿ’ ಎಂದು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ಕೆಂಗೇರಿಯಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಚಿಕ್ಕಮಗಳೂರಿನಿಂದ ‘ಗೋ ಬ್ಯಾಕ್’ ಎಂದು ಹೊರ ಹಾಕಿದವರನ್ನು ತಂದು ಇಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ. ಅಂತಹವರನ್ನು ಬೆಂಗಳೂರಿನವರು ಸ್ವಾಗತ ಮಾಡಬೇಕಾ? ಎಂದು ಬೆಂಗಳೂರು ಉತ್ತರ ಕ್ಷೇತ್ರದ ಶೋಭಾ ಕರಂದ್ಲಾಜೆ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದರು.
ಅಲ್ಲದೆ, ಲೋಕಸಭೆ ಅಭ್ಯರ್ಥಿ ಘೋಷಣೆಯಾಗಿದೆ. ಇದುವರೆಗೂ ಯಾರೊಬ್ಬರೂ ನನಗೆ ಬೆಂಬಲ ಕೊಡಿ ಎಂದು ಕೇಳಿಲ್ಲ. ನನ್ನ ಕ್ಷೇತ್ರದಲ್ಲಿ 7ರಿಂದ 8 ಬಾರಿ ಪ್ರಚಾರ ಮಾಡಿದ್ದಾರೆ. ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಯಾರು ನನ್ನನ್ನು ಸಂಪರ್ಕ ಮಾಡದೇ ಇದ್ದುದಕ್ಕೆ ಸಭೆ ಕರೆದಿದ್ದೇನೆ. ಇಷ್ಟೆಲ್ಲಾ ಆದಮೇಲೆ ಸುಮ್ಮನಿದ್ದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಎಂದು ಸೋಮಶೇಖರ್ ನುಡಿದರು.
ಬಿಜೆಪಿಯವರು ಏನೆಲ್ಲಾ ಅವಮಾನ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ರಾಜ್ಯ ಮಾತ್ರವಲ್ಲದೇ ಕೇಂದ್ರ ನಾಯಕರೂ ನನ್ನ ಸಂಪರ್ಕಿಸಿಲ್ಲ. ಮೊನ್ನೆ ಗೃಹ ಸಚಿವ ಅಮಿತ್ ಶಾ ಬಂದರೂ, ಕೂಡ ನನಗೆ ಆಹ್ವಾನ ನೀಡಿಲ್ಲ. ನಿನ್ನೆಯವರೆಗೂ ಕಾದಿದ್ದೆ, ಆದರೂ ಯಾವುದೇ ಸುಳಿವು ಇಲ್ಲ. ಹಾಗಾಗಿ ಇವತ್ತು ಕಾರ್ಯಕರ್ತರ ಸಭೆ ಕರೆದಿದ್ದೇನೆ. ನಮ್ಮ ಅವಶ್ಯಕತೆ ಇಲ್ಲದವರು ಬಳಿ ನಾವೇಕೆ ಹೋಗಬೇಕು? ಎಂದು ಸೋಮಶೇಖರ್ ಕೇಳಿದರು.
ಇದೇ ವೇಳೆ ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಈಗ ಬಿಜೆಪಿಯ ಯಾರು ಬಂದು ಕೇಳಿದರೂ ನಾನು ಬೆಂಬಲ ನೀಡುವುದಿಲ್ಲ. ನನಗೆ ಯಾವ ಹೈಕಮಾಂಡ್ ಇಲ್ಲ. ನನಗೆ ನನ್ನ ಕ್ಷೇತ್ರದ ಮತದಾರರೇ ಹೈಕಮಾಂಡ್. ಮತದಾರರ ತೀರ್ಮಾನವೇ ನನ್ನ ಅಂತಿಮ ನಿರ್ಧಾರ. ಕಾಂಗ್ರೆಸ್ ಅಭ್ಯರ್ಥಿ ಪರ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.
ತಪ್ಪು ಮಾಡುತ್ತಿರುವ ಸೋಮಶೇಖರ್: ‘ಬಿಜೆಪಿ ಶಾಸಕರಾಗಿದ್ದುಕೊಂಡು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಎಸ್.ಟಿ.ಸೋಮಶೇಖರ್ ತಮ್ಮ ರಾಜಕೀಯ ಜೀವನದಲ್ಲಿ ಅತೀ ದೊಡ್ಡ ತಪ್ಪು ಮಾಡುತ್ತಿದ್ದಾರೆ. ಇದಕ್ಕವರು ಮುಂದಿನ ದಿನಗಳಲ್ಲಿ ತಕ್ಕ ಪ್ರತಿಫಲ ಅನುಭವಿಸುತ್ತಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಸೋಮಶೇಖರ್ ಬಿಜೆಪಿಯಲ್ಲಿಲ್ಲ: ‘ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಬಿಜೆಪಿಯಲ್ಲಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಚ್ಚರಿಕೆ ಹೇಳಿಕೆ ನೀಡಿದ್ದು, ‘ಸೋಮಶೇಖರ್ ಕಾಲು ಹೊರಗಡೆ ಹಾಕಿದ್ದಾರೆ. ಅವರು ಕಾಂಗ್ರೆಸ್‍ನವರ ಸಂಪರ್ಕದಲ್ಲಿ ಇದ್ದಾರೆ. ಅವರ ವಿರುದ್ಧ ಬಿಜೆಪಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಉಲ್ಲೇಖಿಸಿದ್ದಾರೆ.