ಅಕ್ರಮ ಗುರುತು ಚೀಟಿ ಸೃಷ್ಟಿ ಪ್ರಕರಣದ ಸಿಬಿಐ/ಎನ್ ಐಎ ತನಿಖೆಗೆ ಸುರೇಶ್ ಕುಮಾರ್ ಆಗ್ರಹ
Photo credit: Facebook
ಬೆಂಗಳೂರು, ಅ.25: ಹೆಬ್ಬಾಳದ ಅಕ್ರಮ ಗುರುತು ಚೀಟಿ ಸೃಷ್ಟಿ ಪ್ರಕರಣದ ಸಿಬಿಐ ಅಥವಾ ಎನ್ ಐಎ ತನಿಖೆ ಮಾಡಬೇಕು ಎಂದು ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಎಸ್.ಎಲ್. ಟೆಕ್ನೊ ಸೊಲ್ಯೂಶನ್ಸ್ನಲ್ಲಿ ಸಿದ್ಧಪಡಿಸಿದ ನಕಲಿ ಆಧಾರ್ ಕಾರ್ಡ್ಗಳನ್ನು ರದ್ದುಪಡಿಸಬೇಕು. ಅಪರಾಧಿಗಳು ತಪ್ಪಿಸಿಕೊಳ್ಳಲು ಬಿಡಬಾರದು. ಇದು ಕೇವಲ ರಾಜಕೀಯದ ಪ್ರಶ್ನೆಯಲ್ಲ; ಸಮಾಜದ ಅಳಿವು ಉಳಿವಿನ ಪ್ರಶ್ನೆ ಎಂದು ಹೇಳಿದರು.
ಜನ್ಮ ದೃಢೀಕರಣ ಪತ್ರವನ್ನೂ ನೀಡದೆ ಆಧಾರ್ ಕಾರ್ಡ್ ಮಾಡಲಾಗಿದೆ ಎಂದರೆ, ಇವರ ಅಟ್ಟಹಾಸ, ಅಹಂಕಾರ ಎಷ್ಟಿರಬೇಕು ಎಂದು ಪ್ರಶ್ನಿಸಿದರು. ಇದನ್ನೂ ಗಂಭೀರವಾಗಿ ಪರಿಗಣಿಸಬೇಕು. ಇದನ್ನು ಚುನಾವಣಾ ಗೆಲುವಿಗಾಗಿ ಮಾಡಿಸಿದ್ದಾರೆ. ಇದರ ಕುರಿತು ಚುನಾವಣಾ ಆಯೋಗಕ್ಕೂ ದೂರು ಕೊಡಲಿದ್ದೇವೆ. ಆಧಾರ್ ಕಾರ್ಡ್, ನಕಲಿ ಮತದಾರರ ಚೀಟಿ ಜಾಲದ ವ್ಯಾಪ್ತಿಯ ವಿಚಾರಣೆ ಆಗಬೇಕಿದ್ದು, ಎನ್ ಐಎ ಅಥವಾ ಸಿಬಿಐಗೆ ಇದನ್ನು ಒಪ್ಪಿಸಲು ಕೋರಲಿದ್ದೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಈ ವಿಚಾರದಲ್ಲಿ ತಮ್ಮ ಗಾಂಭೀರ್ಯತೆ ತೋರಿಸಲಿ ಎಂದು ಒತ್ತಾಯಿಸಿದ ಸುರೇಶ್ ಕುಮಾರ್ ಅವರು ಭೈರತಿ ಸುರೇಶ್ ವಿಚಾರಣೆಯೂ ನಡೆಯಬೇಕು ಎಂದು ಆಗ್ರಹಿಸಿದರು.
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ಪ್ರಕಾರ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸ್ ಇನ್ ಸ್ಪೆಕ್ಟರ್ ಇದೇ 19ರಂದು ಆರ್ಟಿ ನಗರದ ಸುಲ್ತಾನ ಪಾಳ್ಯ ಬನಶಂಕರಿ ಕಾಂಪ್ಲೆಕ್ಸ್ ನ ಎಂ.ಎಸ್.ಎಲ್. ಟೆಕ್ನೊ ಸೊಲ್ಯೂಶನ್ಸ್ನಲ್ಲಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಇವರು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಾನ್ ಕಾರ್ಡ್ ಮತ್ತಿತರ ದಾಖಲಾತಿಗಳನ್ನು ತಮ್ಮ ಅಂಗಡಿಯ ಕಂಪ್ಯೂಟರ್ ನಲ್ಲಿ ಸುಳ್ಳು ಸೃಷ್ಟಿ ಮಾಡಿ ತಮ್ಮ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಗೆ, ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸಹಕರಿಸುತ್ತಿದ್ದರು. ನಿಜವಾದ ಗುರುತಿನ ಚೀಟಿಗಳೆಂದು ಹೆಚ್ಚಿನ ಹಣಕ್ಕೆ ನೀಡಿ ಸರಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು. ಎಂ.ಎಸ್.ಎಲ್. ಟೆಕ್ನೊ ಸೊಲ್ಯೂಶನ್ಸ್ ಮಾಲಕ ಮೌನೇಶ್ ಕುಮಾರ್ ಹಾಗೂ ಈತನ ಕೃತ್ಯಕ್ಕೆ ಸಹಕರಿಸಿದ ಭಗತ್, ರಾಘವೇಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಲಾಗಿತ್ತು ಎಂದರು.
ಸೆಕ್ಷನ್ 420 ಸೇರಿ ಹಲವು ಸೆಕ್ಷನ್ಗಳಡಿ ಎಫ್ಐಆರ್ ದಾಖಲಾಗಿದೆ. ಈ ಅಪರಾಧವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ. ಆಧಾರ್ ಕಾರ್ಡ್ ನಕಲಿ ಸೃಷ್ಟಿಯು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಮಹಾನ್ ಅಪರಾಧ. ಆರೋಪಿಗಳು ಶಾಸಕ- ಸಚಿವ ಬೈರತಿ ಸುರೇಶ್ ಅವರು ನಿಕಟವರ್ತಿಗಳು ಎಂದು ಆರೋಪಿಸಿದರು. ಮೌನೇಶ್ ಸ್ಕೂಟರ್ ರೈಡ್ ಮಾಡುತ್ತಿದ್ದು, ಬೈರತಿ ಸುರೇಶ್ ಅವರು ಹಿಂದೆ ಕುಳಿತ ಫೋಟೋವನ್ನು ಇದೇವೇಳೆ ಪ್ರದರ್ಶಿಸಿದರು.
ಸರಕಾರ ಇದರ ಹಿಂದಿನ ಜಾಲವನ್ನು ಭೇದಿಸಿ ಪೂರ್ಣ ಜಾಲವನ್ನು ಬಂಧಿಸಲು ಸೂಚಿಸಬೇಕು. ಚುನಾವಣಾ ಆಯೋಗವು ಇಂಥ ಮತದಾರರ ನಕಲಿ ಗುರುತುಚೀಟಿ ಕುರಿತಂತೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ಕಟ್ಟಾ ಜಗದೀಶ್ ನಾಯ್ಡು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.