ಕರ್ನಾಟಕದ ಬರಪರಿಹಾರ ತಡೆಯಲು ಷಡ್ಯಂತ್ರ ನಡೆಸಿದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮುಖಭಂಗ : ಸುರ್ಜೇವಾಲ
"ಪ್ರಧಾನಮಂತ್ರಿ, ಗೃಹಮಂತ್ರಿಗಳ ರೈತ ವಿರೋಧಿ ನಿಲುವಿಗೆ ನ್ಯಾಯಾಲಯವು ತಕ್ಕ ಪಾಠ ಕಲಿಸಿದೆ"
ಬೆಂಗಳೂರು : ರಾಜ್ಯಕ್ಕೆ ಬರಬೇಕಾಗಿದ್ದ 18,172 ಕೋಟಿ ಬರ ಪರಿಹಾರ ತಡೆಯಲು ಷಡ್ಯಂತ್ರ ನಡೆಸಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಂದು ಮುಖಭಂಗವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.
ಕರ್ನಾಟಕದಲ್ಲಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೆಲ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ನಿಭಾಯಿಸಲು ಕರ್ನಾಟಕಕ್ಕೆ ಸಹಾಯ ಮಾಡಲು ಚುನಾವಣಾ ಆಯೋಗ ತನಗೆ ಅನುಮತಿಸಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದ್ದನ್ನು ಉಲ್ಲೇಖಿಸಿ ಅವರು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, "ಇಂದು ನಮ್ಮ ರಾಜ್ಯದ ರೈತರಿಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ರೈತಪರ ಹೋರಾಟಕ್ಕೆ ಜಯ ಸಿಕ್ಕಿದೆ. ರಾಜ್ಯಕ್ಕೆ ಬರಬೇಕಾಗಿದ್ದ 18,172 ಕೋಟಿ ಬರ ಪರಿಹಾರ ತಡೆಯಲು ಷಡ್ಯಂತ್ರ ನಡೆಸಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಂದು ಮುಖಭಂಗವಾಗಿದೆ" ಎಂದು ಹೇಳಿದ್ದಾರೆ.
"ಬರ ಪರಿಹಾರ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿದ್ದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಜಯ ಸಿಕ್ಕಿದ್ದು, ಈ ಮೂಲಕ ಪ್ರಧಾನಮಂತ್ರಿಗಳು ಗೃಹಮಂತ್ರಿಗಳ ರೈತ ವಿರೋಧಿ ನಿಲುವಿಗೆ ನ್ಯಾಯಾಲಯವು ತಕ್ಕ ಪಾಠ ಕಲಿಸಿದೆ. ಪ್ರಧಾನಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಮೊದಲು ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುವುದನ್ನು ಕಲಿಯಬೇಕು. ಕನ್ನಡಿಗರು ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಎಂದಿಗೂ ಸಹಿಸುವುದಿಲ್ಲ. ಕಾಂಗ್ರೆಸ್ ಪಕ್ಷವು ಹಿಂದೆ, ಮುಂದೆ, ಎಂದೆಂದೂ ಕೂಡ ಕನ್ನಡಿಗರ ಹಾಗೂ ರಾಜ್ಯದ ರಕ್ಷಣೆಗಾಗಿ ಸದಾ ಬದ್ದರಾಗಿದ್ದು, ಮುಂದೆಯೂ ಸಹ ನೆಲ ಜಲದ ವಿಚಾರಗಳಲ್ಲಿ ರಾಜಿಯಾಗುವುದಿಲ್ಲ" ಎಂದು ಬರದುಕೊಂಡಿದ್ದಾರೆ.