ಮೃತದೇಹ ಹೊರ ತೆಗೆದು ವಾಮಾಚಾರ ಮಾಡಿರುವ ಶಂಕೆ: ಪ್ರಕರಣ ದಾಖಲು
ಕೋಲಾರ: ತಾಲ್ಲೂಕಿನ ಹೆಬ್ಬಟ ಗ್ರಾಮದ ಹೊರವಲಯದ ಖಬರಸ್ತಾನ್‌ನಲ್ಲಿ ಇತ್ತೀಚೆಗೆ ದಫನ ಮಾಡಲಾಗಿದ್ದ ಮಗುವೊಂದರ ಸಮಾಧಿಯನ್ನು ಅಗೆದು ಮೃತದೇಹ ಹೊರ ತೆಗೆಯಲಾಗಿದ್ದು, ವಾಮಾಚಾರ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
20 ದಿನಗಳ ಹಿಂದೆ ಹೆಬ್ಬಟ ಗ್ರಾಮದ ತಾಯಿ, ಮಗು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತದೇಹಗಳನ್ನು ಗ್ರಾಮದ ಹೊರವಲಯದ ಖಬರಸ್ತಾನ್‌ನಲ್ಲಿ ಸಮಾಧಿ ಮಾಡಲಾಗಿತ್ತು. ಆದರೆ, ನ.19ರಂದು ಸಮಾಧಿಯಿಂದ ಮಗುವಿನ ಮೃತದೇಹ ಹೊರ ತೆಗೆದು ಕೂದಲು ಮತ್ತು ಬಟ್ಟೆ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿ ಮೃತ ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತ ಮಹಿಳೆ ಹಮೀದಾ, ತನ್ನ ಪತಿ ಶೋಯಬ್ ವರದಕ್ಷಿಣೆ ಹಿಂಸೆ ನೀಡುತ್ತಿದ್ದ ಪರಿಣಾಮವಾಗಿ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಶೋಯಬ್ ಸೂಚನೆಯಂತೆ ಶ್ರೀನಿವಾಸಪುರದ ಶ್ರೀರಾಮ್ ಮತ್ತು ನಾರಾಯಣಸ್ವಾಮಿ ಮಗುವಿನ ಸಮಾಧಿ ಅಗೆದಿದ್ದಾರೆ. ಅವರು ನ.19ರಂದು ಬೆಳಗ್ಗೆ ಸ್ಮಶಾನದಲ್ಲಿ ಸುತ್ತಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಮಾಚಾರ ಮಾಡಲೆಂದು ಮಗುವಿನ ಮೃತದೇಹ ಹೊರ ತೆಗೆದಿರುವ ಶಂಕೆ ಇದೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಯಾಗಿದೆ ಎಂದು ಪೋಷಕರು ಪೊಲೀಸರಿಗೆ ನೀಡಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಶ್ರೀನಿವಾಸಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.