ಶಾಸಕರ ಅಮಾನತು; ವಿಧಾನ ಸಭೆ ಕಲಾಪ ಬಹಿಷ್ಕರಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಪ್ರತಿಭಟನೆ
► ರಾಜ್ಯಪಾಲರಿಗೆ ದೂರು ನೀಡಲು ನಿರ್ಧಾರ
ಬೆಂಗಳೂರು: ವಿಧಾನಸಭೆಯಿಂದ ಬಿಜೆಪಿಯ ಶಾಸಕರ ಅಮಾನತು ಖಂಡಿಸಿ ವಿಧಾನ ಸಭೆ, ಪರಿಷತ್ ಕಲಾಪ ಬಹಿಷ್ಕರಿಸಿದ ಬಿಜೆಪಿ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಆರ್.ಅಶೋಕ್, ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ, ಶಾಸಕರು, ಪರಿಷತ್ ಸದಸ್ಯರು ಪಾಲ್ಗೊಂಡಿದ್ದಾರೆ.
ಇದಕ್ಕೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರ್.ಅಶೋಕ್, ''ಸ್ಪೀಕರ್ ಆದವರು ಒಂದು ಪಾರ್ಟಿ ಪರವಾಗಿ ಇರಬಾರದು. ಸೋನಿಯಾ, ರಾಹುಲ್ರನ್ನು ಸ್ಪೀಕರ್ ಭೇಟಿಯಾಗಿದ್ದಾರೆ. ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಿ ನ್ಯಾಯ ಕೇಳಿದ್ದೆವು. ಪ್ರಶ್ನೆ ಮಾಡಿದ್ದಕ್ಕೆ ನಮ್ಮನ್ನು ಅಮಾನತು ಮಾಡಿದ್ದಾರೆ. ಸ್ಪೀಕರ್ ಕ್ರಮ ಖಂಡಿಸಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ'' ಎಂದು ವಾಗ್ದಾಳಿ ನಡೆಸಿದರು.
ಸ್ಪೀಕರ್ ಖಾದರ್ ರಿಂದ ಗವರ್ನರ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಅವರು ತಪ್ಪು ಮಾಡಿದ್ದಾರೆ ಅದಕ್ಕಾಗಿ ನಮಗಿಂತ ಮೊದಲೇ ಅವರು ಗವರ್ನರ್ ಭೇಟಿ ಮಾಡಿದ್ದಾರೆ. ಅವರು ಸರಿಯಾಗಿ ಇದ್ದಿದ್ರೆ ಯಾಕೆ ಹೋಗಬೇಕಿತ್ತು..?'' ಎಂದು ಪ್ರಶ್ನಿಸಿದರು.
'ಈಗ ಸ್ಪೀಕರ್ ಕ್ರಮ ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದು, ಆದಾದ ನಂತರ ಶಾಸಕರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಲಿದೆ' ಎಂದರು.