'ಕಣ್ತಪ್ಪಿನಿಂದ' ತಪ್ಪಾಯ್ತು: ಪಾಕ್ ಧ್ವಜ ಹಾಕಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಸುವರ್ಣ ನ್ಯೂಸ್ ಚಾನಲ್
ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಸ್ಪಷ್ಟನೆ
ಬೆಂಗಳೂರು: ಭಾರತದ ಹಿಂದೂಗಳ ಜನಸಂಖ್ಯೆ ತಿಳಿಸಲು ಭಾರತದ ಧ್ವಜ, ಮುಸ್ಲಿಮರ ಜನಸಂಖ್ಯೆ ತಿಳಿಸಲು ಪಾಕಿಸ್ತಾನದ ಧ್ವಜ ಬಳಸಿದ ಏಷ್ಯಾ ನೆಟ್ ಸುವರ್ಣ ನ್ಯೂಸ್ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ 'ಕಣ್ತಪ್ಪಿನಿಂದ' ತಪ್ಪಾಗಿದೆ ಎಂದು ವಿಷಾದ ವ್ಯಕ್ತಪಡಿಸಿದೆ.
ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯು ಬಿಡುಗಡೆ ಮಾಡಿರುವ ಜನಸಂಖ್ಯಾ ವರದಿ ಕುರಿತ ಸುವರ್ಣ ನ್ಯೂಸ್ ನ ಅಜಿತ್ ಹನುಮಕ್ಕನವರ್ ನಿರ್ವಹಿಸುತ್ತಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಭಾರತದ ಹಿಂದೂಗಳ ಜನಸಂಖ್ಯೆ ತಿಳಿಸಲು ಭಾರತದ ಧ್ವಜ, ಭಾರತದ ಮುಸ್ಲಿಮರ ಜನ ಸಂಖ್ಯೆ ತಿಳಿಸಲು ಪಾಕಿಸ್ತಾನದ ಧ್ವಜದ ಚಿತ್ರ ಬಳಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಚಾನಲ್ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸಿದ್ದು, ಇದು ದುರುದ್ದೇಶವಿಲ್ಲದ 'ಕಣ್ತಪ್ಪಿನಿಂದ' ಆದ ಅಚಾತುರ್ಯ ಎಂದು ಸ್ಪಷ್ಟನೆ ನೀಡಿದೆ.
ಲೋಕಸಭಾ ಚುನಾವಣೆಯ ನಡುವೆಯೇ ದೇಶದಲ್ಲಿ ಹಿಂದೂಗಳ ಜನ ಸಂಖ್ಯೆ ಇಳಿಕೆಯಾಗಿದೆ ಹಾಗೂ ಮುಸ್ಲಿಮರ ಜನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯು ಬಿಡುಗಡೆ ಮಾಡಿರುವ ವರದಿಯು ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ.
ಈ ನಡುವೆ, ಈ ವರದಿಯನ್ನು ಆಧರಿಸಿ ಮುಖ್ಯವಾಹಿನಿಯ ದೃಶ್ಯ ಮಾಧ್ಯಮಗಳು ಸರಣಿ ಚರ್ಚೆ ಕಾರ್ಯಕ್ರಮಗಳನ್ನು ನಡೆಸತೊಡಗಿವೆ. ಇಂತಹುದೇ ಚರ್ಚೆ ಸುವರ್ಣ ನ್ಯೂಸ್ ಕನ್ನಡ ಸುದ್ದಿ ವಾಹಿನಿಯಲ್ಲೂ ಪ್ರಸಾರವಾಗಿತ್ತು.