ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ : ಸಚಿವ ಬೋಸರಾಜು
ಮಡಿಕೇರಿ, ಆ.15: ಪ್ರಸಕ್ತ ಪರಿಸ್ಥಿತಿಯಲ್ಲಿ ನೆರೆಯ ರಾಜ್ಯ ತಮಿಳುನಾಡಿನ ಬೇಡಿಕೆಯಂತೆ ಕಾವೇರಿ ನದಿ ನೀರನ್ನು ಹರಿಸಲು ಸಾಧ್ಯವಿಲ್ಲ. ಮೊದಲು ನಮಗೆ ನಮ್ಮ ರಾಜ್ಯದ ರೈತರ ಹಿತ ಮುಖ್ಯವೆಂದು ಸಣ್ಣ ನೀರಾವರಿ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ತಿಳಿಸಿದ್ದಾರೆ.
ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ರಾಜ್ಯ ಸರಕಾರ, ಬೆಳೆಗಳ ರಕ್ಷಣೆಗಾಗಿ ನಿತ್ಯ ೨೪ ಸಾವಿರ ಕ್ಯೂಸೆಕ್ ಕಾವೇರಿ ನದಿ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಆದರೆ ಇದು ಸಾಧ್ಯವಾಗಲಾರದೆಂದು ಹೇಳಿದರು.
ಈಗಾಗಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ರೈತರ ಹಿತ ಬಲಿಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ನೆರೆಯ ರಾಜ್ಯಕ್ಕೆ ನೀರು ಬಿಡುವ ಅಂಶ ಪ್ರಕೃತಿಯ ಮೇಲೆ ಅವಲಂಬಿತವಾಗಿದೆ. ಈ ಬಗ್ಗೆ ಈಗಾಗಲೇ ಐಸಿಸಿ ಸಭೆ ನಡೆಸಲಾಗಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ನಾಲೆಗಳಿಗೆ ನೀರು ಯಾವಾಗ ಬಿಡಬೇಕೆಂದು ನಿರ್ಧರಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.