ಮೇಕೆದಾಟು ಯೋಜನೆಗೆ ತಮಿಳುನಾಡು ಸಹಕಾರ ನೀಡಬೇಕು: ಡಿ.ಕೆ. ಶಿವಕುಮಾರ್
ಬೆಂಗಳೂರು: ‘ಮೇಕೆದಾಟು ಯೋಜನೆಯಿಂದ ಕರ್ನಾಟಕ ರಾಜ್ಯಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದ್ದು, ಈ ಯೋಜನೆ ಜಾರಿಗೆ ಸಹಕಾರ ನೀಡಿ ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮಿಳುನಾಡು ರಾಜ್ಯಕ್ಕೆ ಮನವಿ ಮಾಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾವೇರಿ ನದಿ ನೀರಿನ ವಿಚಾರದಲ್ಲಿ ನಾವು ಸರ್ವಪಕ್ಷ ಸಭೆ ಮಾಡಿದಂತೆ, ತಮಿಳುನಾಡಿನವರು ಸರ್ವಪಕ್ಷ ಸಭೆ ಮಾಡುತ್ತಿದ್ದಾರೆ. ಅದು ಅವರ ಹಕ್ಕು. ಅವರ ಸಭೆಗೆ ನಮ್ಮ ಆಕ್ಷೇಪವಿಲ್ಲ. ಆದರೆ ನಿಮಗೂ ಹೆಚ್ಚು ಅನುಕೂಲ ಆಗುವ ಮೇಕೆದಾಟು ಯೋಜನೆಗೆ ಸಹಕಾರ ನೀಡಲಿ’ ಎಂದು ಕೋರಿದರು.
‘ರಾಜ್ಯದಲ್ಲಿ ಎರಡು ದಿನಗಳಿಂದ ಹೆಚ್ಚು ಮಳೆ ಬೀಳುತ್ತಿದ್ದು, ಕಾವೇರಿ ಕೊಳ್ಳದ ಅಣೆಕಟ್ಟುಗಳಿಗೆ ಒಳಹರಿವು ಪ್ರಮಾಣ ಹೆಚ್ಚಾಗಿದೆ. ಹಾರಂಗಿಯಿಂದ 20ಸಾವಿರ ಕ್ಯೂಸೆಕ್ ನಷ್ಟು ನೀರನ್ನು ಹೊರಗೆ ಹರಿಬಿಡಲಾಗುತ್ತಿದೆ. ಮಳೆಯೇ ನಮಗೆ ಆಧಾರ. ನಾನು ತಮಿಳುನಾಡಿನ ಬಳಿ ಮನವಿ ಮಾಡಿಕೊಳ್ಳುತ್ತೇನೆ. ನಿಮ್ಮ ಹಿತಾಸಕ್ತಿ ಕಾಪಾಡುವುದಕ್ಕಾಗಿ ಮೇಕೆದಾಟು ಯೋಜನೆಗೆ ಸಹಕಾರ ನೀಡಿ. ಈ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರನ್ನು ನಿಮಗೆ ನೀಡಲಾಗುವುದು. ಬೆಂಗಳೂರಿನಲ್ಲಿ ಕನ್ನಡಿಗರು, ತಮಿಳಿಗರು, ಆಂಧ್ರದವರು ಸೇರಿದಂತೆ ಉತ್ತರ ಭಾರತದ ರಾಜ್ಯಗಳ ಜನರಿದ್ದಾರೆ. ಎಲ್ಲರಿಗೂ ಕುಡಿಯುವ ನೀರು ಲಭಿಸಲಿದೆ ಎಂದು ಅವರು ತಿಳಿಸಿದರು.
ಮಳೆ ಇದೇ ರೀತಿ ಬಿದ್ದರೆ, ತಮಿಳುನಾಡಿಗೆ ನೀರು ಖಂಡಿತವಾಗಿ ಬಿಡುತ್ತೇವೆ. ನಾವು ಬಿಡಲೇಬೇಕು. ಒಳಹರಿವು ಹೆಚ್ಚಳವಾದರೆ ನಾವು ನೀರನ್ನು ಹರಿಸಲೇಬೇಕು. ಅದನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ ಎಂದ ಅವರು, ಕುಮಾರಸ್ವಾಮಿ ಸಿನಿಮಾ ಶೈಲಿಯಲ್ಲಿ ಮಾತನಾಡುತ್ತಿದ್ದಾರೆ. ಗೋಡಂಬಿ, ದ್ರಾಕ್ಷಿ ತಿನ್ನಲು ನಾವು ಸರ್ವಪಕ್ಷ ಕರೆದಿದ್ದೇವಾ? ಹಾಗಿದ್ದರೆ, ಕುಮಾರಸ್ವಾಮಿ ತಮ್ಮ ಪಕ್ಷದ ನಾಯಕರನ್ನು ಸರ್ವಪಕ್ಷ ಸಭೆಗೆ ಗೋಡಂಬಿ, ದ್ರಾಕ್ಷಿ ತಿನ್ನಲು ಕಳುಹಿಸಿದ್ದರೆ?’ ಎಂದು ಪ್ರಶ್ನಿಸಿದರು.
‘ಕುಮಾರಸ್ವಾಮಿಗೆ ನನ್ನ ಮೇಲೆ ಅಸೂಯೆ ಬಿಟ್ಟರೆ ಬೇರೇನೂ ಇಲ್ಲ. ಮೊದಲಿಂದಲೂ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಎಲ್ಲ ವಿಚಾರವನ್ನು ಬಹಿರಂಗವಾಗಿ ಚರ್ಚೆ ಮಾಡೋಣ ಬಾ ಎಂದು ಕರೆಯುತ್ತಿದ್ದೇನೆ. ಕಳೆದ ಬಾರಿ ಸದನದಲ್ಲಿ ಚರ್ಚೆಗೆ ಕರೆದಾಗಲೂ ಬರಲಿಲ್ಲ ಎಂದ ಅವರು ದೂರಿದರು.
‘ನನ್ನ ವಿರುದ್ಧ ಸಿಬಿಐಗೆ ನೀಡಿರುವ ಪ್ರಕರಣ ಲೋಕಾಯುಕ್ತಕ್ಕೆ ನೀಡಲಾಗಿದೆ. ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಆದರೂ ಸಿಬಿಐ ತಮ್ಮ ವ್ಯಾಪ್ತಿ ಮೀರಿ ಈ ಪ್ರಕರಣ ತನಿಖೆ ನಡೆಸಲು ಮುಂದಾಗಿರುವುದು ಏಕೆ ಎಂದು ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಮುಂದಿನ ಒಂದೆರಡು ದಿನಗಳಲ್ಲಿ ಅವರ ಮುಂದೆ ಹೋಗಿ ನನ್ನ ವಿಚಾರ ತಿಳಿಸುತ್ತೇನೆ. ತನಿಖೆ ಹೆಸರಲ್ಲಿ ನನ್ನ ಜತೆ ವ್ಯವಹಾರ ಮಾಡಿದವರಿಗೆ ಕಿರುಕುಳ ನೀಡಿದ್ದಾರೆ’
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ