ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾ : ಎಚ್.ಡಿ.ದೇವೇಗೌಡ
‘ಮೇಕೆದಾಟು ಅಣೆಕಟ್ಟು ಯೋಜನೆಗೆ ಒಪ್ಪಿಗೆ ಕೊಡಿ’
ಎಚ್.ಡಿ.ದೇವೇಗೌಡ
ಹೊಸದಿಲ್ಲಿ : ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಟ್ಯಾಂಕರ್ ಮಾಫಿಯಾ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಇಂದಿಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ‘ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿರುವ, ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ ಆಗಿರುವ ಬೆಂಗಳೂರಿನ ನೀರಿನ ಬವಣೆ ನೀಗಿಸಬೇಕಾದರೆ ಮೇಕೆದಾಟು ಯೋಜನೆಗೆ ಅನುಮತಿ ಸಿಗಬೇಕಿದೆ. ಎಲ್ಲ ರಾಜಕೀಯ ಬದಿಗಿಟ್ಟು ಈ ಯೋಜನೆಗೆ ಬೆಂಬಲ ಕೊಡಬೇಕಿದೆ’ ಎಂದು ಮನವಿ ಮಾಡಿದರು.
‘ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರಕಾರಗಳು ಮೇಕೆದಾಟು ಅಣೆಕಟ್ಟು ಯೋಜನೆಗಾಗಿ ಕೆಲಸ ಮಾಡಿವೆ. ಆದರೆ ಇಲ್ಲಿಯ ವರೆಗೂ ಯಶಸ್ಸು ಸಿಕ್ಕಿಲ್ಲ. ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಕರ್ನಾಟಕ ಸರಕಾರ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರಕಾರ ಆದಷ್ಟು ಬೇಗ ಒಪ್ಪಿಗೆ ನೀಡಬೇಕು ಎಂದು ದೇವೇಗೌಡ ಕೋರಿದರು.
ಟ್ಯಾಂಕರ್ ಮಾಫಿಯಾ :
ಬೆಂಗಳೂರು ನಗರ ಅಗಾಧವಾಗಿ ಬೆಳೆಯುತ್ತಿದೆ. ಉದ್ಯೋಗ ಅರಸಿ ದೇಶದ ಎಲ್ಲ ಮೂಲೆಗಳಿಂದ ಜನರು ಅಲ್ಲಿಗೆ ಹೋಗುತ್ತಿದ್ದಾರೆ. ಎಲ್ಲರಿಗೂ ಆಶ್ರಯ ನೀಡುವ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ ಎಂದು ದೇವೇಗೌಡ ಗಮನ ಸೆಳೆದರು.
1.45 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿಗೆ 16 ಟಿಎಂಸಿ ಅಡಿಯಷ್ಟು ಕಾವೇರಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ, ನಗರದ ಬೇಡಿಕೆಗೆ ಹೋಲಿಸಿದರೆ ಈ ನೀರು ಬಹಳ ಕಡಿಮೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಟ್ಯಾಂಕರ್ ಮಾಫಿಯಾ ಜನರನ್ನು ಸುಲಿಗೆ ಮಾಡುತ್ತಿದೆ. ಒಂದು ಟ್ಯಾಂಕರ್ ನೀರಿಗೆ 3ಸಾವಿರ ರೂ.ತೆರಬೇಕಿದೆ.
ಇದು ಎಷ್ಟು ಅನ್ಯಾಯ ಎಂದರೆ ಕೇವಲ 4 ಜನರಿರುವ ಒಂದು ಕುಟುಂಬ ಪ್ರತೀ ತಿಂಗಳು ನೀರಿಗಾಗಿ 20ಸಾವಿರ ರೂ.ಖರ್ಚು ಮಾಡಬೇಕಿದೆ. ಇದು ಕಳವಳಕಾರಿ. ಈ ಹಿನ್ನೆಲೆಯಲ್ಲಿ ಎಲ್ಲರೂ ರಾಜಕೀಯ ಬದಿಗಿಟ್ಟು ಮೇಕೆದಾಟು ಯೋಜನೆ ಬಗ್ಗೆ ಬೆಂಬಲ ನೀಡಬೇಕಿದೆ. ಈ ಯೋಜನೆ ಕಾರ್ಯಗತವಾದರೆ ಈ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದು ಅವರು ಹೇಳಿದರು.