ಕ್ಯಾಸಿನೋಗಳು, ಕುದುರೆ ರೇಸ್, ಆನ್‍ಲೈನ್ ಗೇಮ್‍ಗಳಿಗೆ ತೆರಿಗೆ: ಸಚಿವ ಪ್ರಿಯಾಂಕ್ ಖರ್ಗೆ
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ತಿದ್ದುಪಡಿ)ವಿಧೇಯಕ ಮಂಡನೆ
ಬೆಳಗಾವಿ: ಕ್ಯಾಸಿನೋಗಳು, ಕುದುರೆ ರೇಸಿಂಗ್ ಮತ್ತು ಆನ್‍ಲೈನ್ ಗೇಮಿಂಗ್ ಮೇಲೆ ತೆರಿಗೆ ವಿಧಿಸುವ ಸಂಬಂಧ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ಎರಡನೇ ತಿದ್ದುಪಡಿ) ವಿಧೇಯಕ-2023 ಅನ್ನು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದರು.
ವಿಧೇಯಕದ ಉದ್ದೇಶ ಮತ್ತು ಕಾರಣ: ಜಿಎಸ್‍ಟಿ ಪರಿಷತ್ತಿನ ಸಚಿವಾಲಯವು ಪ್ರಸಕ್ತ ಸಾಲಿನ ಅ.1ರಿಂದ ಜಾರಿಗೆ ಬರುವಂತೆ ಸಂಬಂಧಪಟ್ಟ ರಾಜ್ಯದ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮಕ್ಕೆ ತಿದ್ದುಪಡಿಗಳನ್ನು ಸೇರಿಸುವಂತೆ ಆ.11ರಂದು ತಿಳಿಸಿದೆ. ಹಾಗಾಗಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ-2017 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.
ವಿಷಯವು ತುರ್ತು ಸ್ವರೂಪದ್ದಾಗಿರುವುದರಿಂದ ಮತ್ತು ರಾಜ್ಯ ವಿಧಾನಮಂಡಲದ ಉಭಯ ಸದನಗಳು ಅಧಿವೇಶನದಲ್ಲಿಲ್ಲದಿರುವುದರಿಂದ, ಮೇಲಿನ ಉದ್ದೇಶವನ್ನು ಸಾಧಿಸಲು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ತಿದ್ದುಪಡಿ) ಅಧ್ಯಾದೇಶ-2023 ಅನ್ನು ಜಾರಿಗೆ ತರಲಾಗಿತ್ತು.
ಈ ಅಧ್ಯಾದೇಶದ ಮೇರೆಗೆ ಮಾಡಿರುವ ತಿದ್ದುಪಡಿಗಳು ಬೆಟ್ಟಿಂಗ್, ಕ್ಯಾಸಿನೊ, ಜೂಜು, ಕುದುರೆ ರೇಸಿಂಗ್, ಲಾಟರಿ ಅಥವಾ ಆನ್‍ಲೈನ್ ಗೇಮಿಂಗ್ ಅನ್ನು ನಿಷೇಧಿಸುವ, ನಿರ್ಬಂಧಿಸುವ ಅಥವಾ ನಿಯಂತ್ರಿಸುವುದಕ್ಕಾಗಿ ಉಪಬಂಧ ಕಲ್ಪಿಸುವ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೆ ಇತರೆ ಕಾನೂನಿನ ಉಪಬಂಧಗಳಿಗೆ ಬಾಧಕವಾಗುವುದಿಲ್ಲ.
ಆದಾಗ್ಯೂ, ಕ್ಯಾಸಿನೋಗಳು, ಕುದುರೆ ರೇಸಿಂಗ್ ಮತ್ತು ಆನ್‍ಲೈನ್ ಗೇಮಿಂಗ್ ಮೇಲಿನ ತೆರಿಗೆ ವಿಧಿಸುವಿಕೆಯು ಈ ವ್ಯವಹಾರವನ್ನು ಕ್ರಮಬದ್ಧಗೊಳಿಸುವುದಿಲ್ಲ ಮತ್ತು ಅದೇ ಕ್ರಮದಲ್ಲಿ ಎಸಗಲಾದ ಯಾವುದೇ ಅಪರಾಧವು ಕ್ರಿಮಿನಲ್ ಕ್ರಮದಿಂದ ವಿನಾಯಿತಿ ಹೊಂದಿರುವುದಿಲ್ಲ. ಈ ವಿಧೇಯಕವು ಸದರಿ ಅಧ್ಯಾದೇಶದ ಬದಲಿ ವಿಧೇಯಕವಾಗಿದೆ ಎಂದು ತಿಳಿಸಲಾಗಿದೆ.