ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ : ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದೇನು?
ಅತುಲ್ ಸುಭಾಷ್/ ಪೊಲೀಸ್ ಆಯುಕ್ತ ದಯಾನಂದ್
ಬೆಂಗಳೂರು : ದೇಶದಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿರುವ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.
ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದುವರೆಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರನ್ನೂ ಬಂಧಿಸಿಲ್ಲ. ಯಾರಿಗೂ ನೋಟಿಸ್ ಕೂಡ ನೀಡಿಲ್ಲ. ಮೃತ ವ್ಯಕ್ತಿಗೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿ. ಮತ್ತು ಕರ್ತವ್ಯ ಆ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.
ಆತ್ಮಹತ್ಯೆ ಪ್ರಕರಣ ಸಂಬಂಧ ಮಾರತ್ ಹಳ್ಳಿ ಠಾಣೆಯ ಇನ್ಸ್ ಪೆಕ್ಟರ್ ತನಿಖಾಧಿಕಾರಿಯಾಗಿದ್ದು, ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಎರಡು ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದರು.
ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಡಿ.9ರಂದು ಮಾರತ್ ಹಳ್ಳಿಯ ಮಂಜುನಾಥ ಲೇಔಟ್ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಮಾರು 24 ಪುಟಗಳ ಡೆತ್ ನೋಟ್ ಬರೆದಿಟ್ಟು, ಸಾವಿನ ಬಳಿಕ ಮೃತದೇಹ ಗಮನಿಸುವವರಿಗೆ ವ್ಯವಸ್ಥಿತವಾಗಿ ಸೂಚನೆಗಳನ್ನು ನೀಡಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿತ್ತು.ಈ ಸಂಬಂಧ ಅತುಲ್ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನ ಅನ್ವಯ ಮಾರತ್ ಹಳ್ಳಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.