‘ಯುಯುಸಿಎಂಎಸ್’ನಿಂದ ವಿವಿಗಳಲ್ಲಿ ತಾಂತ್ರಿಕ ಸಮಸ್ಯೆ
ಹಾಜರಾತಿ, ಫಲಿತಾಂಶ, ಪ್ರವೇಶ ಪತ್ರಗಳ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಹೈರಾಣು
ಬೆಂಗಳೂರು, ಫೆ.25: ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ ವೆಬ್ ಪೋರ್ಟಲ್ (ಯುಯುಸಿಎಂಎಸ್) ಜಾರಿಗೆ ಬಂದ ಮೂರು ವರ್ಷಗಳಿಂದ ಸರ್ವರ್ ಸಮಸ್ಯೆಗಳು, ಫಲಿತಾಂಶಗಳಲ್ಲಿ ವಿಳಂಬ, ತಪ್ಪುಡೇಟಾ, ಅಡ್ಮಿಟ್ ಕಾರ್ಡ್‌ಗಳನ್ನು ನೀಡದಿರುವುದು ಹೀಗೆ ಹತ್ತೂ ಹಲವು ಸಮಸ್ಯೆಗಳಿಗೆ ಸಿಲುಕಿ ಪದವಿ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.
2021ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಜಾರಿಗೊಳಿಸುವ ಸಮಯದಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆಯು, ಉನ್ನತ ಶಿಕ್ಷಣದ ವಿವಿಧ ಚಟುವಟಿಕೆಗಳನ್ನು ಸುಗಮಗೊಳಿಸಲು ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ (ಯುಯುಸಿಎಂಎಸ್) ವೆಬ್ ಪೋರ್ಟಲ್ ಅನ್ನು ಬಿಡುಗಡೆ ಮಾಡಿತ್ತು.
ಈ ವೆಬ್ ಪೋರ್ಟಲ್ ನಿಜವಾಗಿಯೂ ಸೂಕ್ತವಲ್ಲ. ಇದನ್ನು ಬಳಸುವುದು ಗೊಂದಲಮಯವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಅನುಕೂಲವಾಗಿಲ್ಲ. ಯುಯುಸಿಎಂಎಸ್‌ಗೆ ಮೂರೂ ವರ್ಷವಾದರೂ ಇದಕ್ಕೆ ಯಾವುದೇ ರೀತಿಯ ಬದಲಾವಣೆಯನ್ನು ತಂದಿಲ್ಲ ಎಂದು ಪದವಿ ವಿದ್ಯಾರ್ಥಿಯೊಬ್ಬರು ದೂರುತ್ತಾರೆ.
ಪರೀಕ್ಷೆ ನಡೆದು ಹಲವಾರು ತಿಂಗಳುಗಳ ನಂತರ ಪೋರ್ಟಲ್‌ನಲ್ಲಿ ಪದವಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕಾಲೇಜಿನಲ್ಲಿ ಫಲಿತಾಂಶ ಬಿಡುಗಡೆಗೊಳಿಸಿದ ತಕ್ಷಣ ನಮಗೆ ವೆಬ್‌ಪೋರ್ಟಲ್‌ನಲ್ಲಿ ಫಲಿತಾಂಶ ಸಿಗುವುದಿಲ್ಲ. ಇದರಿಂದ ಮುಂದಿನ ಸೆಮಿಸ್ಟರ್‌ಗಳಿಗೆ ಸಮಸ್ಯೆ ಎದುರಾಗುತ್ತದೆ ಎನ್ನುತ್ತಾರೆ ನಗರದ ಖಾಸಗಿ ಕಾಲೇಜಿನ ಐದನೇ ಸೆಮಿಸ್ಟರ್ ಬಿ.ಕಾಮ್ ವಿದ್ಯಾರ್ಥಿ ಶ್ವೇತ್ ಬಾಬು.
ಉನ್ನತ ಶಿಕ್ಷಣ ಇಲಾಖೆಯು ಸಮಸ್ಯೆಗಳನ್ನು ಪರಿಹರಿಸಬೇಕು ಅಥವಾ ಹಳೆಯ ವ್ಯವಸ್ಥೆಯನ್ನೇ ಮತ್ತೆ ಜಾರಿಗೊಳಿಸಬೇಕು. ನನ್ನ ಇಂಗ್ಲಿಷ್ ವಿಷಯದ ಫಲಿತಾಂಶವನ್ನು ಪೋರ್ಟಲ್‌ನಲ್ಲಿ ಪ್ರಕಟಿಸುವಂತೆ ವಿಶ್ವವಿದ್ಯಾನಿಲಯದಲ್ಲಿ ಕೇಳಿದರೆ ಪೋರ್ಟಲ್‌ನ ನ್ಯೂನತೆಗಳನ್ನು ತೆರೆದಿಡುತ್ತಾರೆ. ಹೀಗಾದರೆ ನಮ್ಮ ಸಮಸ್ಯೆಯನ್ನು ಯಾರು ಪರಿಹರಿಸುತ್ತಾರೆ, ಯಾವಾಗ ಬಗೆಹರಿಯುತ್ತದೆ ಎಂದು ಪ್ರಶ್ನಿಸುತ್ತಾರೆ ನಗರದ ಖಾಸಗಿ ಕಾಲೇಜಿನ ಬಿಎ ವಿದ್ಯಾರ್ಥಿನಿ ಸ್ನೇಹಾ.
ಪ್ರವೇಶ ಪತ್ರ ಇಲ್ಲದೇ ಪರೀಕ್ಷೆೆ ಬರೆದರು
ಕ್ಲಪ್ತ ಸಮಯದಲ್ಲಿ ಪರೀಕ್ಷಾ ಶುಲ್ಕ ಪಾವತಿಸಿದ್ದರೂ, ಪ್ರವೇಶ ಪತ್ರ ಸಿಕ್ಕಿರಲಿಲ್ಲ. ಈ ಬಗ್ಗೆ ವಿವಿಯಲ್ಲಿ ಪ್ರಶ್ನಿಸಿದಾಗ ಸರ್ವರ್ ಸಮಸ್ಯೆಯಿಂದ ಹೀಗಾಗಿದೆ ಎಂದು ನೋಡಲ್ ಅಧಿಕಾರಿ ಹೇಳಿದ್ದರು. ಹೀಗಾಗಿ ಪ್ರವೇಶ ಪತ್ರ ಇಲ್ಲದೇ ಪರೀಕ್ಷೆ ಬರೆಯಲು ಅನುಮತಿ ಕೊಟ್ಟಿದ್ದರು. ಆದಾಗ್ಯೂ ಪರೀಕ್ಷೆ ಬರೆದ ಬಳಿಕ ಫಲಿತಾಂಶಗಳನ್ನು ಪ್ರಕಟಿಸುವಾಗ ಮತ್ತೆ ಗೊಂದಲ ಉಂಟಾಯಿತು. ವಿವಿಯು ಪೋರ್ಟಲ್‌ನಲ್ಲಿ ಸರಿಯಾದ ಮಾಹಿತಿಯನ್ನೇ ನೀಡಿಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಎಂಎಸ್ಸಿ ಭೌತಶಾಸ್ತ್ರ ಪದವಿ ಪಡೆದಿರುವ ಅರುಣಾ ಅನುಭವ ಹಂಚಿಕೊಂಡಿದ್ದಾರೆ.
ಈ ವೆಬ್ ಪೋರ್ಟಲ್ ಉತ್ತಮ ದೃಷ್ಟಿ ಮತ್ತು ಧ್ಯೇಯವನ್ನು ಹೊಂದಿದೆ. ಕೆಲವೇ ವರ್ಷಗಳಲ್ಲಿ ಪೋರ್ಟಲ್ ಪರಿಪೂರ್ಣವಾಗಲಿದೆ. ಕೇವಲ ಶೇ.20ರಿಂದ 30ರಷ್ಟು ವಿದ್ಯಾರ್ಥಿಗಳು ಮಾತ್ರ ಸಮಸ್ಯೆಗಳನ್ನು ಎದುರಿಸಿದ್ದಾರೆ. ಈ ಪೋರ್ಟಲ್ ವಿದ್ಯಾರ್ಥಿ ಸಮುದಾಯ ಮತ್ತು ಕಾಲೇಜುಗಳಿಗೆ ಒಂದು ಆಸ್ತಿಯಾಗಿದೆ. ಅದಾಗಿಯೂ ಸಾಫ್ಟ್ ವೇರ್ ಅಭಿವೃದ್ಧಿಯನ್ನು ಅಗತ್ಯತೆಗಳಿಗೆ ಅನುಗುಣವಾಗಿ ಹೊಂದಿಸಬೇಕು. ನಾವು ನಿಯಮಿತ ಸಭೆಗಳನ್ನು ನಡೆಸುತ್ತೇವೆ. ಅಲ್ಲಿ ನಾವು ಅಗತ್ಯ ಬದಲಾವಣೆಗಳನ್ನು ಸೂಚಿಸುತ್ತೇವೆ.
-ಕೆ.ಎಂ.ಪ್ರಧಾನ್, ಯುಯುಸಿಎಂಎಸ್ ನೋಡಲ್ ಅಧಿಕಾರಿ, ಬೆಂಗಳೂರು ವಿವಿ
ತಂತ್ರಜ್ಞಾನದ ಬಳಕೆಯನ್ನು ನಾವು ಸ್ವಾಗತಿಸಬೇಕು. ಆದರೆ ವಿವಿಧ ಪಾಲುದಾರರು ಎತ್ತಿರುವ ದೂರುಗಳನ್ನು ಗಣನೆಗೆ ತೆಗೆದುಕೊಂಡು ಪೋರ್ಟಲ್ ಅನ್ನು ಉತ್ತಮವಾಗಿ ಮಾಡಬೇಕು. ನಗರ ಪ್ರದೇಶದ ವಿಶ್ವವಿದ್ಯಾನಿಲಯಗಳು ಸರಿಯಾದ ಇಂಟರ್ನೆಟ್ ಸೌಲಭ್ಯಗಳನ್ನು ಹೊಂದಿದ್ದರೆ, ಉತ್ತರ ಕರ್ನಾಟಕದ ಪ್ರದೇಶಗಳಿಗೆ ಸರಿಯಾದ ಇಂಟರ್ನೆಟ್ ಸೌಲಭ್ಯಗಳಿಲ್ಲ. ಅದಕ್ಕಾಗಿಯೇ ಪೋರ್ಟಲ್ ಅನ್ನು ವಿಕೇಂದ್ರೀಕರಿಸಬೇಕಾಗಿದೆ.
-ಪ್ರೊ. ಜಫೆಟ್, ವಿಶ್ರಾಂತ ಕುಲಪತಿ, ಬೆಂಗಳೂರು ನಗರ ವಿವಿ