ರಾಜ್ಯ ಸರಕಾರಕ್ಕೆ ಮಾನವೀಯತೆ ಇದ್ದಿದ್ದರೆ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 1 ಕೋಟಿ ರೂ. ಕೊಡುತ್ತಿದ್ದರು: ಸಂಸದ ತೇಜಸ್ವಿ ಸೂರ್ಯ
ಬಿಜೆಪಿಯಿಂದ ಭರತ್ ಭೂಷಣ್, ಮಂಜುನಾಥ್ ಕುಟುಂಬಕ್ಕೆ ತಲಾ 10 ಲಕ್ಷ ರೂ.ನೆರವು

ತೇಜಸ್ವಿ ಸೂರ್ಯ (Photo: X/@Tejasvi_Surya)
ಬೆಂಗಳೂರು: ‘ಜಮ್ಮು-ಕಾಶ್ಮೀರದಲ್ಲಿ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟ ಭರತ್ ಭೂಷಣ್ ಹಾಗೂ ಮಂಜುನಾಥ್ ಕುಟುಂಬದ ಸದಸ್ಯರಿಗೆ ಬಿಜೆಪಿಯಿಂದ ತಲಾ 10 ಲಕ್ಷ ರೂ. ನೆರವು ನೀಡಲಾಗುವುದು’ ಎಂದು ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಪ್ರಕಟಿಸಿದ್ದಾರೆ.
ಸೋಮವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಮಾನವೀಯತೆಯ ಲವಲೇಶವಾದರೂ ಇದ್ದರೆ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟ ಎರಡೂ ಕುಟುಂಬಕ್ಕೆ ಕನಿಷ್ಠ 1ಕೋಟಿ ರೂ.ಗಳನ್ನಾದರೂ ಕೊಡುತ್ತಿದ್ದರು ಎಂದು ಹೇಳಿದರು.
ಬಿಜೆಪಿಯಿಂದ ನೀಡುವ ಮೊತ್ತವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ (ಎಫ್ಡಿ) ಇಟ್ಟರೆ ಅದರ ಬಡ್ಡಿಯಿಂದ ಅವರ ಕುಟುಂಬ, ಶಿಕ್ಷಣ ನಡೆಯುತ್ತಿತ್ತು. ನೆರೆ ರಾಜ್ಯದಲ್ಲಿ ಆನೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟವರಿಗೆ ಈ ರಾಜ್ಯದ ಸಿಎಂ 15 ಲಕ್ಷ ರೂ.ಕೊಟ್ಟಿದ್ದರು. ಆದರೆ, ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ನಮ್ಮ ರಾಜ್ಯದ ಇಬ್ಬರ ಕುಟುಂಬಕ್ಕೆ ಅದಕ್ಕಿಂತ ಹೆಚ್ಚಿನ ನೆರವು ನೀಡವುದು ಬೇಡವೇ? ಎಂದು ಪ್ರಶ್ನಿಸಿದರು.
ಮುಸ್ಲಿಮ್ ಮತಕ್ಕಾಗಿ ತಮ್ಮನ್ನು ತಾವು ಮಾರಿಕೊಂಡ ಕಾಂಗ್ರೆಸ್ ಪಕ್ಷದಿಂದ ನಾವು ಇದಕ್ಕಿಂತ ಜಾಸ್ತಿ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ. ಈ ಕುಟುಂಬಗಳಿಗೆ ಶಕ್ತಿ ಕೊಡುವ ಜವಾಬ್ದಾರಿ ಹಿಂದೂ ಸಮಾಜಕ್ಕೆ ಇದೆ. ಭಯೋತ್ಪಾದಕರ ಕೃತ್ಯ ಖಂಡಿಸಿ ಮೊನ್ನೆ ಬೆಂಗಳೂರು ದಕ್ಷಿಣದಲ್ಲಿ ನಾವು ಪಂಜಿನ ಮೆರವಣಿಗೆ ಮಾಡಿದ್ದೇವೆ. ರಾಜ್ಯ ಸರಕಾರ ಕೊಟ್ಟ ಪರಿಹಾರಕ್ಕಿಂತ ಒಂದು ರೂ. ಹೆಚ್ಚು ಪರಿಹಾರವನ್ನು ಸಂಗ್ರಹಿಸಿ ಕೊಡಬೇಕೆಂದು ಆ ಸಭೆಯ ಕೊನೆಯಲ್ಲಿ ಮನವಿ ಮಾಡಿದ್ದೆ. ಜನರು ಈಗಾಗಲೇ ಸುಮಾರು 20 ಲಕ್ಷ ರೂ.ನೀಡಿದ್ದಾರೆ.
ಶಿಕ್ಷಣದ ಜವಾಬ್ದಾರಿ: ಆರ್.ವಿ. ವಿವಿಯು ನನ್ನ ಮನವಿಗೆ ಸ್ಪಂದಿಸಿ ಪಲ್ಲವಿ ಮಂಜುನಾಥ್ರಿಗೆ ಪತ್ರ ಬರೆದಿದೆ. ಅವರ ಮಗ ಅಭಿಜಯನಿಗೆ ಬಿ.ಕಾಂ. ಸ್ನಾತಕೋತ್ತರ ಪದವಿ ಪಡೆಯಲು ಈ ಶಿಕ್ಷಣ ಸಂಸ್ಥೆಯು ಅವನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸಲಿದೆ. ಇದನ್ನು ಅವನ ತಾಯಿಗೆ ತಲುಪಿಸುತ್ತೇನೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.