ತೇಜಸ್ವಿ ಸೂರ್ಯಗೆ ಟ್ವೀಟ್ ಮಾಡಿ ಡಿಲೀಟ್ ಮಾಡುವುದು ಹವ್ಯಾಸ, ಅವನೊಬ್ಬ ʼಡಿಲೀಟ್ ರಾಜʼ : ಪ್ರಿಯಾಂಕ್ ಖರ್ಗೆ ವ್ಯಂಗ್ಯ
ಪ್ರಿಯಾಂಕ್ ಖರ್ಗೆ/ತೇಜಸ್ವಿ ಸೂರ್ಯ
ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುವುದು, ನಂತರ ಸುಳ್ಳು ಎಂದು ತಿಳಿದ ಕೂಡಲೇ ಡಿಲೀಟ್ ಮಾಡುವುದು ಸಂಸದ ತೇಜಸ್ವಿ ಸೂರ್ಯಗೆ ಇದು ಹವ್ಯಾಸವಾಗಿ ಬಿಟ್ಟಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ(ಗುರುವಾರ) ಹಾವೇರಿಯ ರೈತನ ಆಸ್ತಿಯಲ್ಲಿ ವಕ್ಫ್ ಉಲ್ಲೇಖವಾಗಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಸರಕಾರ ಸ್ಪಷ್ಟನೆ ನೀಡಿದ ನಂತರ ಅದನ್ನು ಡಿಲೀಟ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ಸೂರ್ಯ ಸನಾತನ ಧರ್ಮದ ಕುರಿತು ನೀಡಿದ್ದ ಹೇಳಿಕೆಯನ್ನು ಹಿಂಪಡೆದಿದ್ದರು. ವಿಮಾನ ಹಾರಾಟದಲ್ಲಿರುವಾಗ ತುರ್ತು ನಿರ್ಗಮನ ಬಾಗಿಲು ತೆರೆಯಲು ಮುಂದಾಗಿದ್ದ ಅವರು ನಂತರ ಕ್ಷಮೆ ಕೇಳಿದ್ದರು. ಈ ಅವಿವೇಕಿ ಡಾ.ಅಂಬೇಡ್ಕರ್ ರನ್ನು ದೇಶದ್ರೋಹಿ ಎಂದಿದ್ದ. ಇದು ಆತನ ಬೌದ್ಧಿಕತೆ. ಬೇಕಾಬಿಟ್ಟಿ ಪ್ರಚೋದನಕಾರಿ ಭಾಷಣ ಮಾಡಿದವರೆಲ್ಲಾ ಬೌದ್ಧಿಕವಾಗಿ ಬೆಳೆದಿದ್ದಾರೆಂಬುದಲ್ಲ. ಸುಳ್ಳು ಮಾಹಿತಿಯೇ ಇವರ ಬಂಡವಾಳ. ಈತನೊಬ್ಬ ಡಿಲೀಟ್ ರಾಜ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಯಾರೋ ಒಬ್ಬರು ತೇಜಸ್ವಿ ಸೂರ್ಯ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಇದರಿಂದ ಸಮಾಜದಲ್ಲಿ ಘರ್ಷಣೆಗೆ ಪ್ರೇರಣೆಯಾಗಲಿದೆ ಎಂದು ದೂರು ನೀಡಿದ್ದರು. ಅದರಂತೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇದಕ್ಕೆ ಹೆದರಿಕೊಂಡ ಆ ಪುಟ್ಟ, ‘ಪ್ರಿಯಾಂಕ್ ಖರ್ಗೆಗೆ ಕೆಲಸ ಇಲ್ಲ, ಎಫ್ಐಆರ್ ಹಾಕಿಸುವುದೇ ಕೆಲಸ’ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಾನೆ. ಇದುವರೆಗೂ ಅವರ ಮೇಲೆ, ಬಿಜೆಪಿ ಶಾಸಕರ, ಸಂಸದರ ಹಾಗೂ ಬಾಡಿಗೆ ಭಾಷಣಕಾರರ ಮೇಲೆ ಎಷ್ಟು ಎಫ್ಐಆರ್ ಹಾಕಿಸಿದ್ದೇನೆ. ಸುಳ್ಳು ಸುದ್ದಿ ಹಬ್ಬಿಸುತ್ತಿರುವ ನಿಮಗೆ ಮೆರವಣಿಗೆ ಮೂಲಕ ಸನ್ಮಾನ ಮಾಡಬೇಕಾ? ಸುಳ್ಳು ಹೇಳಿದ ಮೇಲೆ ಅದಕ್ಕೆ ಪ್ರಾಯಶ್ಚಿತವಾಗಬೇಕಲ್ಲವೇ? ಡಿಲೀಟ್ ಮಾಡಿದ್ದೇನೆಂದು ಈಗ ಅಳುತ್ತಾ ಕೂತರೆ ಏನು ಪ್ರಯೋಜನ? ಎಂದು ಪ್ರಿಯಾಂಕ್ ಖರ್ಗೆ ಟೀಕೆ ಮಾಡಿದರು.
ಇವರ ಬಾಡಿಗೆ ಭಾಷಣಕಾರರು ರಕ್ತಹೀರುವ ಕ್ರಿಮಿಗಳು. ಸೂರ್ಯ ಅವರೇ, ಈ ಬಾರಿ ನಿಮಗೆ ಎಮರ್ಜೆನ್ಸಿ ಎಕ್ಸಿಟ್ ಇಲ್ಲ. ಓಡಿ ಹೋಗಲು ಅವಕಾಶವಿಲ್ಲ. ಜನರಿಗೆ ನೀವು ಉತ್ತರಿಸಲೇಬೇಕು. ಮಾತೆತ್ತಿದರೆ ಕುಟುಂಬ ರಾಜಕೀಯದ ಬಗ್ಗೆ ಮಾತನಾಡುವ ನೀವು, ತಾವು ಯಾವ ಕುಟುಂಬದವರು ಎಂದು ಹೇಳುವುದಿಲ್ಲ. ವಿಜಯೇಂದ್ರ, ರಾಘವೇಂದ್ರ ಕಣ್ಣಿಗೆ ಕಾಣುವುದಿಲ್ಲವೇ? ಎಂದು ಅವರು ತರಾಟೆ ತೆಗೆದುಕೊಂಡರು.