ಬಡ ಮಕ್ಕಳಿಗೆ ಜ್ಞಾನ ದೇಗುಲ- ಹೆಮ್ಮನ ಬೇತೂರು ಗ್ರಾಪಂ ದ್ಯಾಮವ್ವನಹಳ್ಳಿ ಸರಕಾರಿ ಶಾಲೆ
ದಾವಣಗೆರೆ: ಶಿಕ್ಷಕರ ಸೇವಾ ಮನೋಭಾವ,ಗ್ರಾಮಸ್ಥರ ಸಹಕಾರ,ಮಕ್ಕಳಲ್ಲಿ ಕಲಿಯುವಂತಹ ಆಸಕ್ತಿಯಿದ್ದರೆ ಯಾವುದೇ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ತಾಲ್ಲೂಕಿನ ಹೆಮ್ಮನ ಬೇತೂರು ಗ್ರಾಮ ಪಂಚಾಯತ್ ವ್ಯಾಪಿಯ ದ್ಯಾಮವ್ವನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದಕ್ಕೊಂದು ಉದಾಹರಣೆಯಾಗಿದೆ.
ದ್ಯಾಮವ್ವನಹಲ್ಲಿ ಒಂದು ಪುಟ್ಟ ಹಳ್ಳಿ. ಈ ಪುಟ್ಟ ಗ್ರಾಮದಲ್ಲಿ 1960 ರಲ್ಲಿ ಪ್ರಾರಂಭವಾದ ಈ ಕಿರಿಯ ಪ್ರಾಥಮಿಕ ಶಾಲೆ ಕೂಲಿ ಕಾರ್ಮಿಕರು ಮತ್ತು ರೈತಾಪಿ ವರ್ಗದವರ ಮಕ್ಕಳಿಗೆ ಜ್ಞಾನ ದೇಗುಲವಾಗಿದೆ.
ಕೋವಿಡ್ ನಂತಹ ವಿಷಮ ಕಾಲದಲ್ಲೂ ಇಲ್ಲಿನ ಇಬ್ಬರು ಶಿಕ್ಷಕರು ಶಾಲೆಯ ಅಭಿವೃದ್ಧಿಯನ್ನು ಸವಾಲಾಗಿ ತೆಗೆದುಕೊಂಡು ಇರುವ 2 ಕೊಠಡಿಗಳಲ್ಲಿ ನಲಿಕಲಿ ತರಗತಿಯ ಕೊಠಡಿಯನ್ನು ನವೀಕರಿಸಬೇಕೆಂದು ಗ್ರಾಮಸ್ಥರ ಜೊತೆ ಸರ್ಕಾರಿ ಶಾಲೆಯ ಬಗ್ಗೆ ಸಂವಾದ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಿ "ನಮ್ಮ ಶಾಲೆ ನಮ್ಮ ಹೆಮ್ಮೆ"ಎಂಬ ಯೋಜನೆ ಹಾಕಿಕೊಂಡು ಅದನ್ನು ಕಾರ್ಯಗತಗೊಳಿಸಲಾಯಿತು.
ಗ್ರಾಮಸ್ಥರ ಆರ್ಥಿಕ ನೆರವು, ದಾನಿಗಳ ಸಹಕಾರದೊಂದಿಗೆ ನಲಿಕಲಿ ಕೊಠಡಿ ಸಂಪೂರ್ಣ ನವೀಕರಣಗೊಂಡು ಮಕ್ಕಳ ಮನೆಯಂತಾಯಿತು. ಇದರ ಪರಿಣಾಮವಾಗಿ 17 ಇದ್ದಂತಹ ದಾಖಲಾತಿ ಪ್ರಮಾಣ 29 ಕ್ಕೆ ಏರಿಕೆ ಕಂಡಿತು.
ರಾಷ್ಟ್ರದ ಅತ್ಯುತ್ತಮ ಮೆದುಳುಗಳು ತರಗತಿಯ ಕೊನೆಯ ಬೆಂಚುಗಳಲ್ಲಿ ಕಂಡುಬರಬಹುದು ಎಂಬ ಎಪಿ ಜೆ ಅಬ್ದುಲ್ ಕಲಾಂ ಅವರ ಹೇಳುವಂತೆ ಈ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಜ್ಞಾನ ಉಣಬಡಿಸುವ ಕೇಂದ್ರವಾಗಿದೆ.
ನವೀಕರಣಗೊಂಡ ನಲಿಕಲಿ ಕೊಠಡಿಯಲ್ಲಿ ಗೋಡೆ ಬರವಣಿಗೆ, ಚಿತ್ರಗಳು ,ಬಣ್ಣಗಳು,ವಿವಿಧ ವೃತ್ತಿಗಳ ಪರಿಚಯ ಹೇಳಿಕೆಗಳು,ಗಣಿತ ,ಪರಿಸರಕ್ಕೆ ಸಂಬಂದಿಸಿದ ವಿಷಯ ವಸ್ತು ,ಪ್ರಾಣಿ,ಪಕ್ಷಿ ವಿವಿಧ ರೀತಿಯ ಕಲಿಕೆಗೆ ಸಂಬಂಧಿಸಿದ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ.
ಮಕ್ಕಳು ಈ ಕೊಠಡಿಗೆ ಬಂದ ತಕ್ಷಣ ಸ್ವಯಂ ಪ್ರೇರಿತರಾಗಿ ಉತ್ಸಾಹದಿಂದ ಕಲಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಕ್ಕಳ ಪುಟ್ಟ ಪ್ರಪಂಚ ಇಲ್ಲಿ ತೆರೆದುಕೊಳ್ಳುತ್ತದೆ. ಇಂತಹದೊಂದು ಉತ್ತಮ ಶಾಲಾ ಪರಿಸರ ಹೊಂದಿರುವುದಕ್ಕೆ ʼಪರಿಸರ ಮಿತ್ರʼ ಎಂಬ ಪ್ರಶಸ್ತಿ ಈ ಶಾಲೆಗೆ ದೊರಕಿದೆ.
ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣವು ಸರ್ವೋತೋಮುಖ ರಾಷ್ಟ್ರೀಯ ಪ್ರಗತಿಗೆ ಆಧಾರವಾಗಿದೆ ಎಂಬ ಡಾ.ಬಿ ಆರ್ ಅಂಬೇಡ್ಕರ್ ಅವರ ಹೇಳಿಕೆಯು ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಆಧಾರಸ್ತಂಭವಾಗಿದೆ. ಈ ನಿಟ್ಟಿನಲ್ಲಿ ದ್ಯಾಮವ್ವನಹಳ್ಳಿ ಶಾಲೆ ಸಾಕ್ಷಿಕರಿಸಿದೆ.
ಜಿ.ಕೊಟ್ರೇಶ್, ಡಿಡಿಪಿಐ, ದಾವಣಗೆರೆ.
…….......................................
ʼಗ್ರಾಮಸ್ಥರ ಸಹಕಾರ, ಸೇವಾ ಮನೋಭಾವವುಳ್ಳ ಪ್ರತಿಯೊಬ್ಬರಿಂದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬಹುದುʼ -ನಾಗರಾಜ ಹೆಚ್ ಶಿಕ್ಷಕರು ದ್ಯಾಮವ್ವನಹಳ್ಳಿ
……………………...............
ʼಕೋವಿಡ್ ಮಹಾಮಾರಿ ಪರಿಣಾಮ ಶಾಲೆಗಳು ಮುಚ್ಚಿರುವ ಸಂದರ್ಭವನ್ನು ಬಳಸಿಕೊಂಡ ಶಿಕ್ಷಕರು ಶಾಲೆಯ ನಲಿಕಲಿ ಕೊಠಡಿಯನ್ನು ಗ್ರಾಮಸ್ಥರ ಸಹಕಾರದಿಂದ ನವೀಕರಣಗೊಳಿಸಿರುವುದು ನಮಗೆಲ್ಲ ಪ್ರೇರಣೆಯಾಗಿದೆʼ
ಶೋಭಾರಾಣಿ ಎಂ ಪಿ- ಅಧ್ಯಕ್ಷರು, ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘ ದಾವಣಗೆರೆ ಉತ್ತರ
……...............................................
ʼನಲಿಕಲಿ ಸಂಪೂರ್ಣ ಚಟುವಟಿಕೆ ಆಧಾರಿತ ಬೋಧನಾ ಕ್ರಮವಾಗಿದ್ದು ಮಕ್ಕಳ ಮನೆಯನ್ನಾಗಿ ನವೀಕರಣಗೊಳಿಸಿದ ಶಿಕ್ಷಕರ ಕಾರ್ಯ ಮಾದರಿಯಾಗಿದ್ದು ತಾಲೂಕಿನಾದ್ಯಂತ ನಲಿಕಲಿ ಕೊಠಡಿಗಳು ಶೃಂಗಾರಗೊಂಡು ಮಕ್ಕಳ ಕಲಿಕೆಗೆ ಪ್ರೇರಣೆಯಾಗಲಿʼ
ಶೇರ್ ಅಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ದಾವಣಗೆರೆ ಉತ್ತರ
...
ʼಸರ್ಕಾರದ ಸೌಲಭ್ಯಗಳ ಜೊತೆಗೆ ಗ್ರಾಮಸ್ಥರ ನೆರವಿನಿಂದ ನಲಿಕಲಿ ಕೊಠಡಿಯನ್ನು ನವೀಕರಣಗೊಳಿಸಿರುವುದು ನಮಗೆಲ್ಲ ಮಾದರಿಯಾಗಿದೆʼ
ಅಬು ಸ್ವಾಲೇಹ್, ನಿರ್ದೇಶಕರು ಕರಾಪ್ರಾಶಾಶಿಸಂಘ ದಾವಣಗೆರೆ ಉತ್ತರ