ಬೆಂಗಳೂರು: ನಿಂತಿದ್ದ ವಿಮಾನಕ್ಕೆ ಟೆಂಪೋ ಟ್ರಾವೆಲರ್ ಢಿಕ್ಕಿ

Photo credit: NDTV
ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಇಂಡಿಗೊ ವಿಮಾನಕ್ಕೆ ಟೆಂಪೋ ಟ್ರಾವೆಲರ್ ಢಿಕ್ಕಿ ಹೊಡೆದಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ಶನಿವಾರ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಜಿನ್ ಸಮಸ್ಯೆ ಇದ್ದ ಇಂಡಿಗೊ 0320 ವಿಮಾನವನ್ನು ಪಾರ್ಕಿಂಗ್ ವೇ ಬಳಿಯ ಏರ್ಸೈಡ್ನಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಟೆಂಪೋ ಟ್ರಾವಲರ್ ವಿಮಾನಕ್ಕೆ ಢಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ.
ವಿಮಾನ ನಿಲ್ದಾಣ ಸಿಬ್ಬಂದಿ ಮಾಹಿತಿ ಪ್ರಕಾರ, ಟೆಂಪೋ ಟ್ರಾವೆಲರ್ ಚಾಲಕ ನಿದ್ದೆಯ ಮಂಪರಿನಲ್ಲಿದ್ದು, ನಿಯಂತ್ರಣ ತಪ್ಪಿ ವಿಮಾನಕ್ಕೆ ಢಿಕ್ಕಿ ಹೊಡೆದಿದ್ದಾನೆ. ವಿಮಾನದ ಕೆಳ ಭಾಗಕ್ಕೆ ಢಿಕ್ಕಿ ಹೊಡೆದ ನಂತರ ಎಚ್ಚೆತ್ತುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಸಂದರ್ಭದಲ್ಲಿ ಟೆಂಪೋ ಟ್ರಾವೆಲರ್ ನಲ್ಲಿ ಯಾರೂ ಇರಲಿಲ್ಲ. ಘಟನೆ ಸಂಬಂಧ ಹೆಚ್ಚಿನ ತನಿಖೆ ಆರಂಭವಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ತನಿಖೆ ಕೈಗೊಂಡಿದೆ.
Next Story