ದೇಶದ ಬೆನ್ನೆಲುಬು ರೈತ, ಆ ರೈತನಿಗೆ ಬೆನ್ನೆಲುಬು ನಮ್ಮ ಕಾವೇರಿ: ಶಿವರಾಜ್ ಕುಮಾರ್
ವೀಡಿಯೊ ಹೇಳಿಕೆ ಬಿಡುಗಡೆ ಮಾಡಿದ ನಟ
ಬೆಂಗಳೂರು: ಕರ್ನಾಟಕ –ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
''ರೈತ ದೇಶದ ಬೆನ್ನೆಲುಬು ಅಂತಾರೆ ಆ ರೈತನ ಬೆನ್ನೆಲುಬು ನಮ್ಮ ಕಾವೇರಿ. ರಾಜ್ಯದಲ್ಲಿ ಈ ಸರಿ ಮಳೆಯ ಅಭಾವವಿದು ರೈತ ಆಗಲೇ ಸಂಕಷ್ಟದಲ್ಲಿದಾನೆ. ಎರಡು ರಾಜ್ಯದ ನಾಯಕರು ಹಾಗು ನ್ಯಾಯಾಲಯ ಎಲ್ಲ ಅಂಶಗಳನ್ನು ಪರಿಶೀಲಿಸಿ ಒಂದು ಸಮಾಧಾನಕರ ಪರಿಹಾರ ಕಂಡುಕೊಳ್ಳಬೇಕು ಅನ್ನೋದು ನನ್ನ ಪ್ರಾರ್ಥನೆ'' ಎಂದು ಶಿವರಾಜ್ ಕುಮಾರ್ ಬುಧವಾರ ಟ್ವಿಟರ್ ನಲ್ಲಿ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಹಲವು ದಿನಗಳಿಂದ ಕಾವೇರಿ ಹೋರಾಟದ ಪರವಾಗಿ ಧ್ವನಿ ಎತ್ತದೇ ಇರುವುದಕ್ಕೆ ಕನ್ನಡ ಚಿತ್ರರಂಗದ ನಟ-ನಟಿಯರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನಟ ದರ್ಶನ್, ಸುದೀಪ್ ಸೇರಿ ಹಲವರು ಪ್ರತಿಕ್ರಿಯಿಸಿದ್ದಾರೆ.
ʼʼಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿʼʼ ಎಂದು ದರ್ಶನ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ʼʼಸ್ನೇಹಿತರೆ, ನಮ್ಮ ಕಾವೇರಿ ನಮ್ಮ ಹಕ್ಕು . ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿʼʼ
- ಸುದೀಪ್, ನಟ