ರಾಜ್ಯದಿಂದ ಹೆಚ್ಚುವರಿ ಅಕ್ಕಿ ಖರೀದಿಗೆ ಕೇಂದ್ರ ಸರಕಾರ ಸಮ್ಮತಿ
ಸಾಂದರ್ಭಿಕ ಚಿತ್ರ | PTI
ಬೆಂಗಳೂರು : ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮನವಿಗೆ ಸ್ಪಂದಿಸಿರುವ ಕೇಂದ್ರ ಸರಕಾರ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 50 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿ ಅಕ್ಕಿ ಖರೀದಿಗೆ ಸಮ್ಮತಿಸಿದ್ದು, ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ನೀಡಲಾಗುತ್ತಿರುವ ಪ್ರಮುಖ ಆಹಾರ ಪದಾರ್ಥಗಳಲ್ಲಿ ಅಕ್ಕಿಯೂ ಸೇರಿದೆ. ಕರ್ನಾಟಕ ಅಧಿಕ ಭತ್ತ ಬೆಳೆಯುವ ರಾಜ್ಯಗಳಲ್ಲಿ ಒಂದಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಉತ್ಪಾದಿಸುತ್ತಿದೆ. ರಾಜ್ಯದಲ್ಲಿ 48.91 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಉತ್ಪಾದನಾ ಸಾಮರ್ಥ್ಯವಿದೆ. ಆದರೆ, ಕೇಂದ್ರದಿಂದ ಬೆಂಬಲ ಬೆಲೆಯೊಂದಿಗೆ ಕೇವಲ 1.5 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಕೇಂದ್ರ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ 2024-25ನೇ ಸಾಲಿನಲ್ಲಿ ಬೆಂಬಲ ಬೆಲೆಯೊಂದಿಗೆ ಕನಿಷ್ಠ 5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ನಿರ್ದೇಶನ ನೀಡುವಂತೆ ಚಲುವರಾಯಸ್ವಾಮಿ ಕಳೆದ ಸಾಲಿನ ಡಿ.13ರಂದು ಪತ್ರ ಬರೆದು ಮನವಿ ಮಾಡಿದ್ದರು.
ಇದಕ್ಕೆ ಸ್ಪಂದನೆ ನೀಡಿರುವ ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ, 2 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಸೂಕ್ತ ಕ್ರಮ ವಹಿಸುವಂತೆ ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಇಲಾಖೆ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.