ಮತ್ತೆ ತೆರಿಗೆ ಅನ್ಯಾಯ ; ಕನ್ನಡಿಗರನ್ನು ಕೆಣಕುತ್ತಿರುವ ಕೇಂದ್ರ ಸರಕಾರ : ಡಿ.ಕೆ.ಸುರೇಶ್ ಆಕ್ರೋಶ
ಬೆಂಗಳೂರು: "ಪದೇ, ಪದೇ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಪಾಲಿನಲ್ಲಿ ಮೋಸವಾಗುತ್ತಿದೆ. ಕನ್ನಡಿಗರು ಹಾಗೂ ದಕ್ಷಿಣ ಭಾರತೀಯರ ಮನಸ್ಸನ್ನು ಕೇಂದ್ರ ಸರ್ಕಾರ ಕೆಣಕುತ್ತಿದೆ" ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕನ್ನಡಿಗರಿಗೆ ಆಗುತ್ತಿರುವ ಮೋಸವನ್ನು ಬಹಳ ದುಃಖದಿಂದ ಹೇಳುತ್ತಿದ್ದೇನೆ. ದೇಶದಲ್ಲಿಯೇ ಅತ್ಯಂತ ಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯ ಕರ್ನಾಟಕಕ್ಕೆ 6,498 ಕೋಟಿ ರೂಪಾಯಿ ಕೊಡಲಾಗಿದೆ. ದಕ್ಷಿಣ ಭಾರತ ರಾಜ್ಯಗಳಿಗೆ ಒಟ್ಟಾರೆ 28,152 ಕೋಟಿ ರೂಪಾಯಿ ತೆರಿಗೆ ಪಾಲು ಕೊಡಲಾಗಿದೆ. ಆದರೆ ಉತ್ತರ ಪ್ರದೇಶ ರಾಜ್ಯವೊಂದಕ್ಕೆ 31,962 ಕೋಟಿ ರೂಪಾಯಿ ನೀಡಲಾಗಿದೆ. ನಮಗೆ ಈಗಾಗಲೇ ಆಗಿರುವ ಅನ್ಯಾಯವನ್ನಾದರೂ ಕನಿಷ್ಠ ಪಕ್ಷ ಸರಿದೂಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬಹುದಿತ್ತು. 2022 ರ ಕೇಂದ್ರ ಬಜೆಟ್ ಸಂದರ್ಭದಲ್ಲಿಯೇ ರಾಜ್ಯಗಳ ತೆರಿಗೆ ಪಾಲಿನ ತಾರತಮ್ಯದ ಬಗ್ಗೆ ನಾನು ದನಿಯೆತ್ತಿದ್ದೆ. ಅದರಲ್ಲೂ ಕರ್ನಾಟಕಕ್ಕೆ ಮತ್ತು ದಕ್ಷಿಣ ಭಾರತ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದೆ" ಎಂದು ಹೇಳಿದರು.
"ಉತ್ತರ ಭಾರತ ರಾಜ್ಯಗಳಂತೆ, ದಕ್ಷಿಣ ಭಾರತದ ರಾಜ್ಯಗಳನ್ನೂ ಕೇಂದ್ರ ಸರ್ಕಾರ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ನಮ್ಮ ರಾಜ್ಯಗಳ ಅಭಿವೃದ್ದಿಗೆ ಪೂರಕವಾಗಿ ನಿಲ್ಲಬೇಕು ಎನ್ನುವ ಆಲೋಚನೆ ಕೇಂದ್ರ ಸರ್ಕಾರಕ್ಕೆ ಬರಬೇಕು" ಎಂದರು.
ಕರ್ನಾಟಕದ ಮೇಲೆ ಮಲತಾಯಿ ಧೋರಣೆ ಏಕೆ?:
"ಬಿಜೆಪಿ ಹಾಗೂ ಮಿತ್ರಪಕ್ಷದ 19 ಮಂದಿ ಸಂಸತ್ ಸದಸ್ಯರನ್ನು ಕರ್ನಾಟಕದಿಂದ ಕಳುಹಿಸಲಾಗಿದೆ. ಕಳೆದ 5 ಚುನಾವಣೆಗಳಲ್ಲಿ ಅತಿ ಹೆಚ್ಚು ಸಂಸದರನ್ನು ಕರ್ನಾಟಕದಿಂದ ಕಳುಹಿಸಿದರೂ ಏಕೆ ಈ ಧೋರಣೆ? ಕರ್ನಾಟಕದ ಜನರ ಮೇಲೆ ಮಲತಾಯಿ ಮತ್ಸರವೇಕೆ? ವಿಜಯದಶಮಿಯ ದಿನ ಕರ್ನಾಟಕಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಹಕ್ಕೋತ್ತಾಯ ಮಾಡುತ್ತಿದ್ದೇನೆ" ಎಂದು ಹೇಳಿದರು.
ನನ್ನ ಹಿಂದಿನ ಹೇಳಿಕೆ ತಿರುಚಲಾಗಿತ್ತು:
ತೆರಿಗೆ ಅನ್ಯಾಯ ಮುಂದುವರೆದರೆ ದಕ್ಷಿಣ ಭಾರತ ಬೇರೆಯಾಗುವ ಪರಿಸ್ಥಿತಿ ಬರುತ್ತದೆ ಎನ್ನುವ ಹಿಂದಿನ ಹೇಳಿಕೆ ಬಗ್ಗೆ ಕೇಳಿದಾಗ, " ನಾನು ಹೇಳಿದ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷ ತಿರುಚಿತ್ತು. ಮತ್ತೆ, ಮತ್ತೆ ಇದೇ ರೀತಿಯ ಕೆಲಸವನ್ನು ಮಾಡಲಾಗುತ್ತಿದೆ" ಎಂದರು.
ತಮಿಳುನಾಡು ಪ್ರತ್ಯೇಕ ದೇಶದ ದನಿ ಎತ್ತಿತ್ತು :
"ಈ ಹಿಂದೆಯೇ ತಮಿಳುನಾಡಿನವರು ಪ್ರತ್ಯೇಕ ರಾಷ್ಟ್ರದ ದನಿ ಎತ್ತಿದ್ದರು. ನಾನು ರಾಜ್ಯಗಳ ಹಿತಾಸಕ್ತಿಗೆ ಧಕ್ಕೆ ತರಬಾರದು ಎಂದು ಮನವಿ ಮಾಡಿದ್ದೆ. ಕೇಂದ್ರ ಸರ್ಕಾರದ ಧೋರಣೆ ಸರಿಯಿಲ್ಲ. ಎಂದಿಗೂ ಕರ್ನಾಟಕವನ್ನು , ದಕ್ಷಿಣ ಭಾರತೀಯರನ್ನು ಕಡೆಗಣಿಸಬೇಡಿ. ನಾವು ಕೂಡ ಭಾರತ ಮಾತೆಯ ಮಕ್ಕಳು. ನಮ್ಮ ಮೇಲೆ ಮಲತಾಯಿ ಧೋರಣೆ ಸರಿಯಲ್ಲ" ಎಂದರು.
ಕರ್ನಾಟಕಕ್ಕೆ ಎಲ್ಲಾ ವಿಚಾರಗಳಲ್ಲಿ ವಿಜಯ ದೊರಕಲಿ :
"ಮುಂದಿನ ದಿನಗಳಲ್ಲಿ ಕರ್ನಾಟಕ ಎಲ್ಲಾ ವಿಚಾರಗಳಲ್ಲೂ ವಿಜಯ ಸಾಧಿಸಲಿ. ತಾಯಿ ಭಾರತಾಂಬೆಯ ಮಡಿಲಲ್ಲಿ ನಾವಿದ್ದೇವೆ. ನಮ್ಮ ಕನ್ನಡಾಂಬೆ ಎಂದೆಂದಿಗೂ ವಿಜಯಪತಾಕೆಯನ್ನು ಹಾರಿಸಲಿ ಎಂದು ಆಶಿಸುತ್ತೇನೆ" ಎಂದರು.