‘ಬಸ್ ಪ್ರಯಾಣ ದರ’ ಶೇ.15ರಷ್ಟು ಹೆಚ್ಚಳಕ್ಕೆ ಸಿಎಸ್ ನೇತೃತ್ವದ ಸಮಿತಿ ಶಿಫಾರಸ್ಸು
ಸಾಂದರ್ಭಿಕ ಚಿತ್ರ
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸೇರಿದಂತೆ ನಾಲ್ಕೂ ನಿಗಮಗಳ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಶಿಫಾರಸ್ಸು ಮಾಡಿದೆ.
ಸಾರಿಗೆ ನಿಗಮಗಳು 2020ರಿಂದ ಪ್ರಯಾಣ ದರ ಪರಿಷ್ಕರಣೆ ಮಾಡದಿರುವ ಕಾರಣಕ್ಕೆ ನಷ್ಟಕ್ಕೆ ಸಿಲುಕಿವೆ. ವಾರ್ಷಿಕ 3,650ಕೋಟಿ ರೂ.ಹೊರೆಯಾಗುತ್ತಿದ್ದು, ಪ್ರಯಾಣ ದರ ಪರಿಷ್ಕರಣೆಯಿಂದ ನಷ್ಟದ ಪ್ರಮಾಣ 1,800ಕೋಟಿ ರೂ.ಗೆ ಇಳಿಯುತ್ತದೆ ಎಂದು ವಿಶ್ಲೇಷಿಸಲಾಗಿದೆ. ನಿಗಮಗಳಿಗೆ ಆಗುತ್ತಿರುವ ನಷ್ಟವನ್ನು ಭರಿಸಲು ಸಂಪನ್ಮೂಲ ಕ್ರೊಢೀಕರಣಕ್ಕೆ ಆದ್ಯತೆ ನೀಡಲಾಗಿದೆ.
ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ ಯೋಜನೆ’ ಜಾರಿ ನಂತರ ನಿತ್ಯ ಪ್ರಯಾಣಿಕರ ಸಂಖ್ಯೆ 80ಲಕ್ಷದಿಂದ 1.05 ಕೋಟಿಗೆ ಏರಿಕೆಯಾಗಿದೆ. ಆ ಪೈಕಿ 26 ಲಕ್ಷ ಮಹಿಳೆಯರು ಸೇರಿದ್ದಾರೆ. ಸರಕಾರ ನೀಡುವ ಸಬ್ಸಿಡಿ ಜೊತೆಗೆ ನಿಗಮಗಳು ಸಂಪನ್ಮೂಲ ಕ್ರೊಢೀಕರಣಕ್ಕೆ ಹೆಚ್ಚು ಒತ್ತು ನೀಡದಿದ್ದರೆ ಪ್ರಯಾಣಿಕರಿಗೆ ಮೂಲಸೌಕರ್ಯ ಕಲ್ಪಿಸಲು ಕಷ್ಟಸಾಧ್ಯ ಎಂದು ಹೇಳಲಾಗಿದೆ.
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕೇಂದ್ರ ಸರಕಾರ ರಿಯಾಯಿತಿ ದರದಲ್ಲಿ ನೀಡುವ ವಿದ್ಯುತ್ ಚಾಲಿತ ಬಸ್ಗಳನ್ನು ಪಡೆಯಲು ಆದ್ಯತೆ ಕೊಡಿ. ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮತ್ತು ಇ-ಆಡಳಿತಕ್ಕೆ ಒತ್ತು ಕೊಡುವಂತೆ ಸಲಹೆ ನೀಡಿದ್ದು, ನಿಗದಿತ ದಿನಗಳೊಳಗೆ ಸೂಕ್ತ ಕಾರ್ಯಕ್ರಮ ರೂಪಿಸಲು ಆದೇಶ ನೀಡಲಾಗಿದೆ ಎಂದು ಗೊತ್ತಾಗಿದೆ.
ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್, ಸಾರಿಗೆ ನಿಗಮಗಳ ವ್ಯವಸ್ಥಾಪಕರಾದ ವಿ. ಅನ್ಬುಕುಮಾರ್, ಆರ್.ರಾಮಚಂದ್ರನ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.