ಕರ್ನಾಟಕವನ್ನು ʼಕುಡುಕರ ತೋಟʼವನ್ನಾಗಿ ಮಾಡಲು ಹೊರಟ ಕಾಂಗ್ರೆಸ್ ಸರಕಾರ: ಎಚ್.ಡಿ.ಕುಮಾರಸ್ವಾಮಿ
ತಮ್ಮನ್ನ ತಾವೇ ಮಾರ್ಕೊಳ್ಳೋದಕ್ಕಿಂತ ಒಳ್ಳೆಯದೇ ಬಿಡಿ ಎಂದು ಕಾಲೆಳೆದ ನಟ ಪ್ರಕಾಶ್ ರಾಜ್
ಬೆಂಗಳೂರು, ಸೆ.24: ಮನೆಮನೆಗೂ ಮದ್ಯಭಾಗ್ಯ ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಕುಡುಕರ ತೋಟವನ್ನಾಗಿ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಅಬಕಾರಿ ಆದಾಯವನ್ನು ಹೆಚ್ಚಿಸಿಕೊಳ್ಳಲು ಮೂರು ಸಾವಿರ ಜನಸಂಖ್ಯೆಯುಳ್ಳ ಪ್ರತೀ ಹಳ್ಳಿಯಲ್ಲೂ ಮದ್ಯದ ಅಂಗಡಿ ತೆರೆಯುವುದು, ಸೂಪರ್ ಮಾರ್ಕೆಟ್ ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆ ಕಿಡಿಕಾರಿದ್ದಾರೆ.
ನಾರಿಯರಿಗೆ ‘ಶಕ್ತಿ' ತುಂಬುತ್ತೇವೆ ಎಂದ ಸರಕಾರ, ಈಗ ಅವರ ಬಾಳಿಗೆ ಬೆಂಕಿ ಹಾಕುತ್ತಿದೆ. ‘ಗೃಹಲಕ್ಷ್ಮೀ' ಎಂದ ಸರಕಾರ ಅವರ ಬಾಳಿಗೆ ಗ್ರಹಣವಾಗಿದೆ. ‘ಗೃಹಜ್ಯೋತಿ' ಎಂದ ಸರಕಾರ ಅವರ ಬಾಳಜ್ಯೋತಿಯನ್ನೆ ನಂದಿಸುತ್ತಿದೆ. ‘ಅನ್ನಭಾಗ್ಯ' ಎಂದ ಸರಕಾರ, ಈಗ ‘ಮದ್ಯಭಾಗ್ಯ' ಎನ್ನುತ್ತಿದೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕ ರಾಜ್ಯವು ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಐಟಿ-ಬಿಟಿಗೆ ಪ್ರಸಿದ್ಧಿ. ಇನ್ನು ಮುಂದೆ ಇದು ಬದಲಾಗಬಹುದು. ಕಾರಣವಿಷ್ಟೇ; ಕಾಂಗ್ರೆಸ್ ಸರಕಾರ ‘ಕರ್ನಾಟಕವನ್ನು ಕುಡುಕರ ತೋಟ'ವನ್ನಾಗಿ ಮಾಡಲಿದೆ. ಚುನಾವಣೆಗೆ ಮುನ್ನ ‘ಸರ್ವ ಜನಾಂಗದ ಶಾಂತಿಯ ತೋಟ' ಎನ್ನುತ್ತಿದ್ದರು, ಗೆದ್ದ ನಂತರ 'ಕರ್ನಾಟಕ ಕುಡುಕರ ತೋಟ' ಎನ್ನುತ್ತಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರಕಾರದ ಸಂಕಲ್ಪವಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಯೋಜನೆಗಳ ಹೆಸರಲ್ಲಿ ಕೊಳ್ಳೆ ಹೊಡೆಯುವ ಹುನ್ನಾರ ಕಾಂಗ್ರೆಸ್ ಸರಕಾರದ್ದು. ಒಂದೆಡೆ ಮನೆಮನೆಗೂ ಗೃಹಜ್ಯೋತಿ ಎಂದು ಹೇಳಿ, ಈಗ ಮನೆಮನೆಗೂ ‘ಮದ್ಯಭಾಗ್ಯ' ನೀಡಲು ಹೊರಟಿದೆ. ಸರಕಾರವು ಧನಪಿಶಾಚಿ ಅವತಾರವೆತ್ತಿ ಅಬಕಾರಿ ಆದಾಯ ಹೆಚ್ಚಿಸಿಕೊಳ್ಳಲು ಈಗ ಮದ್ಯ ಸಮಾರಾಧನೆಗೆ ಶ್ರೀಕಾರ ಹಾಡಿದೆ. ಇದು 6ನೇ ಗ್ಯಾರಂಟಿ ಎಂದು ಅವರು ಲೇವಡಿ ಮಾಡಿದ್ದಾರೆ.
ಖೊಟ್ಟಿ ಗ್ಯಾರಂಟಿಗಳಿಂದ ಜನರನ್ನು ಯಾಮಾರಿಸಿದ್ದು ಸಾಲದೆಂಬಂತೆ ಪ್ರತೀ ಪಂಚಾಯಿತಿಯಲ್ಲೂ ಮದ್ಯದ ಅಂಗಡಿ ತೆರೆಯಲು ಸಿದ್ಧತೆ ನಡೆಸಿರುವುದು ನಾಚಿಕೆಗೇಡು. ಅಕ್ಕಿ, ಬೇಳೆ, ದವಸಧಾನ್ಯ, ಹಣ್ಣು ತರಕಾರಿ, ಹಾಲು-ಮೊಸರು ಸಿಗುವ ಸೂಪರ್ ಮಾರುಕಟ್ಟೆಗಳಲ್ಲೂ ಮುಕ್ತವಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದು ಅಸಹ್ಯದ ಪರಮಾವಧಿ. ಇದಾ ಸಮಾಜವಾದ? ಎಂದು ಕುಮಾರಸ್ವಾಮಿ ಕಿಡಿಗಾರಿದ್ದಾರೆ.
3 ಸಾವಿರ ಜನಸಂಖ್ಯೆಯುಳ್ಳ ಪ್ರತೀ ಗ್ರಾಮ, ಪಂಚಾಯಿತಿ ವ್ಯಾಪ್ತಿಯಲ್ಲಿ ಬಾರ್ ತೆಗೆದು ಮನೆಹಾಳು ಮಾಡಲಿದೆ ಸರಕಾರ. ಸುಳ್ಳು ಗ್ಯಾರಂಟಿಗಳನ್ನು ನಂಬಿ ಮೋಸ ಹೋದ ಮಹಿಳೆಯರಿಗೆ ಕರ್ನಾಟಕದಲ್ಲಿ ಕೇಡುಗಾಲ ಶುರುವಾಗಿದೆ. ಅವರ ಸೌಭಾಗ್ಯಕ್ಕೆ ಎದುರಾಗಿದೆ ಸಂಚಕಾರ. ಇದು ಮನೆಹಾಳು ಸರಕಾರ ಎಂದು ಅವರು ಹೇಳಿದ್ದಾರೆ.
ಕುಮಾರಸ್ವಾಮಿಗೆ ನಟ ಪ್ರಕಾಶ್ ರಾಜ್ ತಿರುಗೇಟು
ಕಾಂಗ್ರೆಸ್ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿರುವ ಕುಮಾರಸ್ವಾಮಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಬಹು ಭಾಷಾ ನಟ ಪ್ರಕಾಶ್ ರಾಜ್ ತಿರುಗೇಟು ನೀಡಿದ್ದಾರೆ.
ʼʼಚುನಾವಣೆಗೆ ಮುನ್ನ ‘ಸರ್ವ ಜನಾಂಗದ ಶಾಂತಿಯ ತೋಟ' ಎನ್ನುತ್ತಿದ್ದರು, ಗೆದ್ದ ನಂತರ 'ಕರ್ನಾಟಕ ಕುಡುಕರ ತೋಟ' ಎನ್ನುತ್ತಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರಕಾರದ ಸಂಕಲ್ಪವಾಗಿದೆʼʼ ಎಂಬ ಕುಮಾರಸ್ವಾಮಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್, ʼʼತಮ್ಮನ್ನ ತಾವೇ ಮಾರ್ಕೊಳ್ಳೋದಕ್ಕಿಂತ… ಒಳ್ಳೇದೆ ಬಿಡಿ. #justaskingʼʼ ಎಂದು ಕಾಲೆಳೆದಿದ್ದಾರೆ.