ಹುತಾತ್ಮ ಯೋಧ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ.ರೂ ಪರಿಹಾರಧನ ಚೆಕ್ ಹಸ್ತಾಂತರಿಸಿದ ಜಿಲ್ಲಾಧಿಕಾರಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ ಹುತಾತ್ಮ ಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರಧನ ಚೆಕ್ ಅನ್ನು ಜಿಲ್ಲಾಧಿಕಾರಿ ದಯಾನಂದ್ ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರು.
ಕಳೆದ ತಿಂಗಳು ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ಜೊತೆ ಕಾಳಗದಲ್ಲಿ ಕರ್ನಾಟಕ ಮೂಲದ ಪ್ರಾಂಜಲ್ ಮೃತಪಟ್ಟಿದ್ದರು. ಈ ಸಂದರ್ಭ ಮುಖ್ಯಮಂತ್ರಿಗಳು ಕುಟುಂಬಕ್ಕೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದರು.
ಸೋಮವಾರ ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ಐವತ್ತು ಲಕ್ಷ ರೂ ಪರಿಹಾರಧನ ಮಂಜೂರು ಮಾಡಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು,"ದೇಶ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಶ್ರಮಿಸುವ ಪ್ರತಿಯೊಬ್ಬ ಯೋಧನ ಬಗ್ಗೆ ನಮಗೆ ಅಪಾರ ಗೌರವವಿದೆ. ಹುತಾತ್ಮ ಯೋಧ ಪ್ರಾಂಜಲ್ ಅವರ ತ್ಯಾಗ, ಬಲಿದಾನಕ್ಕೆ ಬೆಲೆಕಟ್ಟಲಾಗದು, ಆದರೆ ದೇಶದ ಕೋಟ್ಯಂತರ ಜನರ ಪರವಾಗಿ ಈ ಹೊತ್ತಿನಲ್ಲಿ ಅವರ ಕುಟುಂಬದ ಜೊತೆ ನಿಲ್ಲಬೇಕಾದುದ್ದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ. ಪರಿಹಾರಧನದ ಚೆಕ್ ಅನ್ನು ಸಿದ್ಧಪಡಿಸಲಾಗಿದ್ದು ನಾಳೆ ಮೃತ ಯೋಧನ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಮತ್ತೊಮ್ಮೆ ಕ್ಯಾಪ್ಟನ್ ಪ್ರಾಂಜಲ್ ಅವರ ಅನನ್ಯ ದೇಶಸೇವೆ, ಸಮರ್ಪಣಾಭಾವವನ್ನು ಗೌರವದಿಂದ ಸ್ಮರಿಸುತ್ತಾ, ಗೌರವ ನಮನ ಸಲ್ಲಿಸುತ್ತೇನೆ" ಎಂದು ತಿಳಿಸಿದ್ದರು.