ಗ್ಯಾರಂಟಿ ಯೋಜನೆ ಮೊದಲ ಫಲಾನುಭವಿಗಳು ಬಿಜೆಪಿಗರೇ: ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ
ಕಲಬುರ್ಗಿ: ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳ ಮೊದಲ ಫಲಾನುಭವಿಗಳು ಬಿಜೆಪಿ ಪಕ್ಷದವರೇ ಆಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಮಂಗಳವಾರ 2018-19ನೆ ಸಾಲಿನ ಡಿಎಂಎಫ್ ಯೋಜನೆಯಡಿಯಲ್ಲಿ ಕೊಲ್ಲೂರು ಗ್ರಾಮದಿಂದ ಬನ್ನಟ್ಟಿಯವರೆಗೆ 5.70 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಗೃಹ ಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಟೀಕಿಸುವ ಬಿಜೆಪಿಗರು ಈ ಎಲ್ಲ ಯೋಜನೆಗಳ ಮೊದಲ ಫಲಾನುಭವಿಗಳು ಅವರೇ ಆಗಿದ್ದಾರೆ. ಶಕ್ತಿ ಯೋಜನೆಯ ಲಾಭ ಪಡೆಯುತ್ತಿರುವ ಮಹಿಳೆಯರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲವೇ? ಇದಕ್ಕೆ ಏಕೆ ಬಿಜೆಪಿ ವಿರೋಧಿಸುತ್ತಿದೆ ಎಂದು ಟೀಕಿಸಿದರು.
ರಾಜ್ಯದ ಆರು ಕೋಟಿ ಜನರಲ್ಲಿ 4.80 ಕೋಟಿ ಜನರು ಈ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಇವರಲ್ಲಿ ಕೇವಲ ಕಾಂಗ್ರೆಸ್ ನವರು ಮಾತ್ರವೇ ಇದ್ದಾರೆಯೇ? ಬಿಜೆಪಿಗರು ಇಲ್ಲವೇ? ಆರ್ಥಿಕ ಸ್ಥಿರತೆಗಾಗಿ ಪ್ರತಿ ತಿಂಗಳು 2 ಸಾವಿರ ಧನ ಸಹಾಯ ಮಾಡುವ ಗೃಹಲಕ್ಷ್ಮೀ ಯೋಜನೆ ಜಾರಿಗೆ ತರಲಾಗಿದೆ. ಇದರಿಂದಾಗಿ ಗೃಹಿಣಿಯರು ಮನೆಯ ಸಂಸಾರಕ್ಕಾಗಿ ಅದೇ ಹಣ ಬಳಕೆ ಮಾಡುತ್ತಿದ್ದಾರೆ. ಇದು ಜನಪರ ಆಡಳಿತಧ್ಯೋತಕವಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಪ್ರತಿ ಪಂಚಾಯತಿಗಳಿಗೆ ಹೈಬ್ರಿಡ್ ಲೈಬ್ರರಿ ನಿರ್ಮಾಣ ಮಾಡುವ ಗುರಿ ಇದ್ದು ಮುಂದಿನ ಎರಡು ವರ್ಷಗಳಲ್ಲಿ ಲೈಬ್ರರಿಗಳನ್ನು ಅರಿವು ಕೇಂದ್ರ ಎನ್ನುವ ಹೆಸರಿನಲ್ಲಿ ಸ್ಥಾಪಿಸಲಾಗುವುದು. ಜೊತೆಗೆ ಬಸವ ತತ್ವದ ಮಾದರಿಯಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ 25 ಲಕ್ಷ ಖರ್ಚು ಮಾಡಿ ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಲಾಗುವುದು. ಅಂತಹ ಶೌಚಾಲಯಗಳ ನಿರ್ವಹಣೆ ನೀವೇ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.