ರೈತನ ಆತ್ಮಹತ್ಯೆ ಬಗ್ಗೆ ಸುಳ್ಳು ಸುದ್ದಿ ಹರಡಿದ ಆರೋಪ ಪ್ರಕರಣ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಗೆ ಹೈಕೋರ್ಟ್ ತಡೆ
Photo credit: X@Tejasvi_Surya
ಬೆಂಗಳೂರು: 'ವಕ್ಫ್ ಬೋರ್ಡ್ ಆಸ್ತಿ ಕಿರಿಕಿರಿಗೆ ಬೇಸತ್ತು ಹಾವೇರಿಯ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂಬ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ತೋರಿಸಿದ ಪರಿಣಾಮ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರನಗಿರಿ ರೈತ ರುದ್ರಪ್ಪ(24) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪಕ್ಕೆ ಸಂಬಂಧಿಸಿ ಸಂಸದ ತೇಜಸ್ವಿ ಸೂರ್ಯ ವಿರುದ್ದದ ಹಾವೇರಿ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಈ ಎಫ್ ಐ ಆರ್ ರದ್ದುಪಡಿಸುವಂತೆ ಕೋರಿ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.ವಿಚಾರಣೆ ವೇಳೆ ತೇಜಸ್ವಿ ಸೂರ್ಯ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ಈ ದೂರು ದುರುದ್ದೇಶಪೂರಿತ ಮತ್ತು ಕಾನೂನುಬಾಹಿರವಾಗಿದೆ. ಅರ್ಜಿದಾರರು ಜವಾಬ್ದಾರಿಯುತ ಸಂಸದರಾಗಿದ್ದು, ಯಾವುದೇ ಸಮುದಾಯಗಳ ಮಧ್ಯೆ ದ್ವೇಷ ಬಿತ್ತುವ ಕೆಲಸ ಮಾಡಿಲ್ಲ. ಇದೊಂದು ಪೂರ್ವಾಗ್ರಹಪೀಡಿತ ದೂರಾಗಿದ್ದು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಎಫ್ಐಆರ್ ಗೆ ಮಧ್ಯಂತರ ತಡೆ ನೀಡಿದೆ. ಅಂತೆಯೇ, ಪ್ರಾಸಿಕ್ಯೂಷನ್ ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿದೆ.