ಮುರುಘಾ ಶ್ರೀ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಹೈಕೋರ್ಟ್ ತಡೆ
ಬೆಂಗಳೂರು: : ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.
ಚಿತ್ರದುರ್ಗ ಜಿಲ್ಲಾ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಮುಂದಿರುವ ಪ್ರಕರಣಗಳ ವಿಚಾರಣೆಗೆ ತಡೆ ಕೋರಿ ಮುರುಘಾ ಶ್ರೀ ಸಲ್ಲಿಸಿದ್ದ ನಾಲ್ಕು ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಮಂಗಳವಾರ ವಿಚಾರಣೆ ನಡೆಸಿತು.
ಶರಣರ ವಿರುದ್ಧದ ಪ್ರಕರಣಗಳ ಕಡತಗಳನ್ನು ತರಿಸಿಕೊಂಡು ಪರಿಶೀಲಿಸಿ ವರದಿ ನೀಡುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶನ ನೀಡಿತು. ಸ್ಥಳೀಯ ಪಬ್ಲಿಕ್ ಪ್ರಾಸಿಕ್ಯೂಟರ್ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಗೆ ಆದೇಶಿಸಿತು. ನಾಲ್ಕೂ ಅರ್ಜಿಗಳ ವಿಲೇವಾರಿ ಆಗುವ ತನಕ ಅವುಗಳ ಮುಂದಿನ ವಿಚಾರಣೆಗೆ ತಡೆ ನೀಡಿತು.
‘ಹೈಕೋರ್ಟ್ ಜಾಮೀನು ನೀಡಿದರೂ ಸಹ ಆರೋಪಿಯನ್ನು ತಕ್ಷಣವೇ ಬಿಡುಗಡೆಗೆ ಆದೇಶಿಸಲಿಲ್ಲ. ಇದರಿಂದಾಗಿ ಮುರುಘಾ ಶ್ರೀ ಮೂರು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಯ್ತು’ ಎಂದು ವಿಚಾರಣೆ ವೇಳೆ ಮುರುಘಾ ಶ್ರೀ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ‘ಜಿಲ್ಲಾ ನ್ಯಾಯಾಧೀಶರು ಪ್ರಾಸಿಕ್ಯೂಟರ್ ಸಲ್ಲಿಸಿದ ಮೆಮೊ ಅನ್ನು ಕಣ್ಣು ಮುಚ್ಚಿ ಅಂಗೀಕರಿಸಿದ್ದಾರೆ. ಆರೋಪಿಯನ್ನು ಬಿಡುಗಡೆ ಮಾಡಿದ ಜೈಲು ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಹೈಕೋರ್ಟ್ ಆದೇಶವನ್ನು ಪಾಲಿಸದೇ ಇರುವ ಅವರ ಈ ಕ್ರಮ ಸರಿಯಲ್ಲಅಬಿಪ್ರಾಯ ಪಟ್ಟ ಪೀಠವು . ಹೈಕೋರ್ಟ್ ಆದೇಶದ ಬಗ್ಗೆ ಅವರು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ. ಸಾಲು ಸಾಲಾಗಿ ತಪ್ಪುಗಳನ್ನು ಮಾಡಿದ್ದಾರೆ’ ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.
‘ವಿಚಾರಣೆ ಮುಂದೂಡುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ವಿಚಾರಣೆ ನಡೆಸಲಾಗಿದೆ. ಚಿತ್ರದುರ್ಗಕ್ಕೆ ಬರದಂತೆ ಹೈಕೋರ್ಟ್ ಷರತ್ತು ವಿಧಿಸಿದ್ದರೂ ವಾರಂಟ್ ಮೂಲಕ ಅವರನ್ನು ಚಿತ್ರದುರ್ಗ ಜಿಲ್ಲೆಗೆ ಕರೆತರುವಂತೆ ಆದೇಶಿಸಿಸಲಾಗಿದೆ . ಹೀಗಾಗಿ, ಸಾಕ್ಷ್ಯ ವಿಚಾರಣೆಯನ್ನು ಬೇರೆ ಕೋರ್ಟ್ ಗೆ ವರ್ಗಾಯಿಸಲು ಆದೇಶಿಸಬೇಕು’ ಎಂದು ಸಿ.ವಿ.ನಾಗೇಶ್ ಮನವಿ ಮಾಡಿದರು.
ಮುರುಘಾ ಶ್ರೀ ಪ್ರಕರಣದ ಬಗ್ಗೆ ಅಭಿಪ್ರಾಯ ಪಟ್ಟ ಪೀಠವು‘ಆರೋಪಿ ಯಾರೇ ಅಗಿರಲಿ ನಮಗೆ ಅದು ಮುಖ್ಯವಲ್ಲ. ಆರೋಪಿಯನ್ನು ತರಾತುರಿಯಲ್ಲಿ ಬಂಧಿಸಿದ ಕ್ರಮ ಸರಿಯಲ್ಲ. ಹೈಕೋರ್ಟ್ ಆದೇಶ ವ್ಯರ್ಥ ಗೊಳಿಸುವ ಯತ್ನವನ್ನು ಒಪ್ಪಲಾಗುವುದಿಲ್ಲ’ ಎಂದು ಹೇಳಿತು.