ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿ: ಚಲುವರಾಯಸ್ವಾಮಿ ವಿರುದ್ಧದ ಆರೋಪಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಬೆಂಗಳೂರು: ʼಮಂಡ್ಯ ಜಿಲ್ಲೆಯ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬರ್ಥದಲ್ಲಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿಯಾದುದು ಎಂದು ಬಯಲಾಗಿದೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ʼಅಂತಹ ಅಧಿಕಾರಿಗಳು ಯಾರು ಜಿಲ್ಲೆಯಲ್ಲಿ ಇಲ್ಲ ಎಂದು ಮಂಡ್ಯದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಈ ಸಂಬಂಧ ಪರಿಶೀಲನೆ ನಡೆಸಿ, ಅಗತ್ಯ ಕಂಡುಬಂದಲ್ಲಿ ತನಿಖೆ ನಡೆಸುತ್ತೇವೆʼ ಎಂದು ತಿಳಿಸಿದ್ದಾರೆ.
ʼʼಬಿಜೆಪಿಯ ನಾಯಕರೇ ಇಂತಹ ನಕಲಿ ಪತ್ರವನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ನೀವೇ ಇದರ ಸೃಷ್ಟಿಕರ್ತರೋ? ಅಥವಾ ನಿಮ್ಮ "ಬ್ರದರ್ರೋ"?ʼʼ ಎಂದು ಮುಖ್ಯಮಂತ್ರಿಗಳು ಕಿಡಿಕಾರಿದ್ದಾರೆ.
ತನಿಖೆ ನಡೆಸೋಣ: ಡಿಕೆಶಿ
ʼಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳಿಂದ ರಾಜ್ಯಪಾಲರಿಗೆ ದೂರು ವಿಚಾರವಾಗಿ ತನಿಖೆ ನಡೆಸೋಣ. ಪಾಪ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.ಅದರಲ್ಲೂ ನಾವು ಮಂಡ್ಯದಲ್ಲಿ ಏಳಕ್ಕೆ ಆರು ಗೆದ್ದುಬಿಟ್ಟಿದ್ದೀವಲ್ಲ ಅದಕ್ಕಾಗಿ ಸಹಿಸಿಕೊಳ್ಳಲು ಆಗುತ್ತಿಲ್ಲʼ
.-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ