ಹಾಸನ ಜಿಲ್ಲೆಯ ಪ್ರಮುಖ ಸರಕಾರಿ ಹುದ್ದೆಯಲ್ಲಿ ಮಹಿಳೆಯರದ್ದೇ ಸಿಂಹ ಪಾಲು
ಮಹಿಳಾ ಅಧಿಕಾರಿಗಳು
ಹಾಸನ, ಜು.27: ಶಿಲ್ಪಕಲೆ, ವಾಣಿಜ್ಯ ಬೆಳೆ, ಕೃಷಿ ಪ್ರವಾಸೋದ್ಯಮ, ತಂತ್ರಜ್ಞಾನ ಮತ್ತು ರಾಜಕಾರಣಕ್ಕೆ ಹೆಸರಾಗಿದ್ದ ಹಾಸನ ಜಿಲ್ಲೆ ಈಗ ಸರಕಾರಿ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸುವ ಮೂಲಕ ಸಿಂಹಪಾಲು ಪಡೆದಿದ್ದಾರೆ.
ಕಂದಾಯ, ಪೊಲೀಸ್, ಕೃಷಿ, ಆರೋಗ್ಯ, ನ್ಯಾಯಾಲಯ, ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರದ್ದೇ ಸಿಂಹ ಪಾಲು. ಕಾನೂನುಗಳನ್ನು ಸಮರ್ಪಕವಾಗಿ ಬಳಸುವ, ಅನುಷ್ಠಾನಗೊಳಿಸುವ, ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುವ, ಪ್ರಾಮಾಣಿಕತೆ, ಮಾನವೀಯತೆ, ಸಭ್ಯತೆ, ಸ್ವಚ್ಛತೆ, ಪರಿಸರ ಪ್ರೇಮ, ಶಾಂತಿ ಸೌಹಾರ್ದವನ್ನು ಮೈಗೂಡಿಸಿಕೊಂಡಿರುವ ಹಲವು ಮಹಿಳಾ ಅಧಿಕಾರಿಗಳು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಜಿಲ್ಲಾದ್ಯಂತ ಉನ್ನತ ಮಟ್ಟದ ಹುದ್ದೆಗಳಲ್ಲಿ ಮಹಿಳೆಯರೇ ಮುಖ್ಯಸ್ಥರು: ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹಾಸನ ತಹಶೀಲ್ದಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ, ಕಾರ್ಮಿಕ ಅಧಿಕಾರಿ, ನ್ಯಾಯಧೀಶರು ಸೇರಿದಂತೆ ಬಹುತೇಕ ಅಧಿಕಾರಿಗಳು ಮಹಿಳೆಯರೇ ಆಗಿದ್ದಾರೆ.
ಜಿಲ್ಲಾಧಿಕಾರಿಯಾಗಿ ಸತ್ಯಭಾಮಾ ಅವರು ಅಧಿಕಾರ ವಹಿಸಿಕೊಂಡಿದ್ದು, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ ಅಧಿಕಾರದಲ್ಲಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಶಾಂತಲಾ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಸನ ತಾಲೂಕು ತಹಶೀಲ್ದಾರ್ ಆಗಿ ಶ್ವೇತಾ ಕೆಲ ತಿಂಗಳ ಹಿಂದೆ ನೇಮಕಗೊಂಡಿದ್ದಾರೆ. ಕೃಷಿ ಇಲಾಖೆ ಜಂಟಿ ನಿರ್ದೇಶಕಿಯಾಗಿ ಡಾ.ರಾಜಸುಲೋಚನಾ, ಕಾರ್ಮಿಕ ಅಧಿಕಾರಿ ಯಮುನಾ ನೇಮಕಗೊಂಡಿದ್ದಾರೆ. ಜಿಲ್ಲಾ ನ್ಯಾಯಾಧೀಶೆಯಾಗಿ ಕಾವ್ಯಶ್ರೀ ರಾಧಾರೂಪ ರಾಮ್ರಾವ್ ಕುಲಕರ್ಣಿ ಕಾರ್ಯನಿರ್ವಹಿಸುತ್ತಿದ್ದಾರೆ.
► ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮಹಿಳೆಯರು ಪ್ರಮುಖ ಹುದ್ದೆಗಳಿಗೆ ನೇಮಕ
ಹಾಸನದ ಜಿಲ್ಲಾಧಿಕಾರಿ ಸತ್ಯಭಾಮಾ ಅವರು 2002ರಲ್ಲಿ ಸರಕಾರಿ ಸೇವೆಗೆ ಸೇರ್ಪಡೆಯಾಗಿದ್ದು, ಈ ಹಿಂದೆ ಜಿಲ್ಲಾಧಿಕಾರಿಯಾಗಿ ಕೋಲಾರದಲ್ಲಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಚಿತ್ರದುರ್ಗ, ಚಿಕ್ಕಬಳ್ಳಾಪುರದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ನಿರ್ದೇಶಕಿ, ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ ನಂತರ ಹಾಸನ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ.
ಸಕಲೇಶಪುರ ತಾಲೂಕಿನಲ್ಲಿ ತಹಶೀಲ್ದಾರ್ ಮೇಘನಾ, ಅರಣ್ಯ ಇಲಾಖೆ ಅಧಿಕಾರಿ ಶಿಲ್ಪ್ಪಾ, ಬಿಇಒ ಪುಷ್ಪಾ, ತೋಟಗಾರಿಕೆ ಇಲಾಖೆಯಲ್ಲಿ ವಿಜಯ ಚಿತ್ರ, ಕಾರ್ಮಿಕ ಇಲಾಖೆಯಲ್ಲಿ ಸ್ವರ್ಣ ಗೌರಿ, ನ್ಯಾಯಧೀಶೆಯಾಗಿ ಧನಲಕ್ಷ್ಮೀ ಕಾರ್ಯನಿರ್ವಹಿಸುತ್ತಿದ್ದಾರೆ. ಅರಸಿಕೇರೆ ತಾಲೂಕಿನಲ್ಲಿ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ನಗರ ಸಬ್ ಇನ್ಸ್ಪೆಕ್ಟರ್ ಲತಾ.ಎಂ.ಜಿ. ಹೊಳೇನರಸೀಪುರ ತಾಲೂಕಿನಲ್ಲಿ ಸಿಡಿಪಿಒ ಭಾಗ್ಯಮ್ಮ, ಕೃಷಿ ಇಲಾಖೆ ಅಧಿಕಾರಿ ಸಪ್ನ, ಮೀನುಗಾರಿಗೆ ಇಲಾಖೆ ಅಧಿಕಾರಿಯಾಗಿ ಪದ್ಮ ಕಾರ್ಯನಿರ್ವಹಿಸುತ್ತಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ರೇಖಾ ಬಾಯಿ, ಅಬಕಾರಿ ನಿರಕ್ಷಕರಾಗಿ ಅನೀತಾ, ಅರಣ್ಯ ಇಲಾಖೆ ಅಧಿಕಾರಿ ಪಲ್ಲವಿ, ಚುನಾವಣಾಧಿಕಾರಿ ಅನಿತಾ, ಬಿಇಒ ದೀಪ, ಕೃಷಿ ಇಲಾಖೆ ಅಧಿಕಾರಿ ರಶ್ಮಿ, ನ್ಯಾಯಧೀಶರಾಗಿ ಎಸ್.ರಶ್ಮಿ, ಮಮತಾ, ಸುನೀತಾ. ಆಲೂರು ತಾಲೂಕಿನ ಸಬ್ಇಕ್ಟರ್ ಜನಬಾಯಿ ಕಡಪಟ್ಟಿ, ನ್ಯಾಯವಾದಿ ನಿರ್ಮಲ ಎಂ.ಸಿ. ಬೇಲೂರು ತಾಲೂಕಿನ ಸರಕಾರಿ ತಹಶೀಲ್ದಾರ್ ಎಂ.ಮಮತಾ, ಅಬಕಾರಿ ನಿರೀಕ್ಷಕರು ಚಂದನ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಕಾವ್ಯ, ಸಾಮಾಜಿಕ ಅರಣ್ಯಾಧಿಕಾರಿ ಶೃತಿ, ಬಿಇಒ ಸುನೀತಾ. ಅರಕಲಗೂಡು ತಾಲೂಕಿನ ನ್ಯಾಯಾಧೀಶೆಯಾಗಿ ಚೇತನಾ ಮಳವಳ್ಳಿ, ಕೃಷಿ ಅಧಿಕಾರಿ ಕವಿತಾ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಸನ ಜಿಪಂ ಸಿಇಒ ಆಗಿರುವ ಬಿ.ಆರ್. ಪೂರ್ಣಿಮಾ ಅವರು, ಮಂಡ್ಯ ಜಿಲ್ಲೆಯ ಬೆಸಗರಹಳ್ಳಿ ಗ್ರಾಮದವರು. ರಾಜ್ಯದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಬೆಸಗರಹಳ್ಳಿ ರಾಮಣ್ಣನವರ ಪುತ್ರಿಯಾದ ಇವರು, ಮೈಸೂರು ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದು ಮೊದಲಿಗೆ ಉಪನ್ಯಾಸಕರಾಗಿ ಮತ್ತು ಅಬಕಾರಿ ಇಲಾಖೆಯಲ್ಲಿ ಅಬಕಾರಿ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದು, 2004ರಲ್ಲಿ ಕೆ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 2006ರಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ, ಮಂಡ್ಯ ಜಿಲ್ಲೆಯ ಭೂಸ್ವಾಧೀನ ಅಧಿಕಾರಿ, ರಾಮನಗರ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಮಂಡ್ಯ, ಮೈಸೂರು ಮತ್ತು ಹಾಸನ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
'ಸ್ವಚ್ಛ ಶನಿವಾರ ಖ್ಯಾತಿಯ ಸತ್ಯಾಭಾಮ':
ಚಿತ್ರದುರ್ಗದಲ್ಲಿ ಸತ್ಯಭಾಮ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡುವಾಗ. ಬಡಜನರ ಪರವಾಗಿ ಇವರು ಸಾಕಷ್ಟು ಕಾಳಜಿ ವಹಿಸುತ್ತಿದ್ದರು. ಇವರ ಕಾರ್ಯಗಳಲ್ಲಿ ಪ್ರಮುಖವಾದದ್ದು ಸ್ವಚ್ಛ ಶನಿವಾರ, ಪ್ರತಿ ಶನಿವಾರ ಸಂಘ ಸಂಸ್ಥೆಗಳು ಹಾಗೂ ಅಧಿಕಾರಿಗಳ ಜೊತೆಗೂಡಿ ಆಸ್ಪತ್ರೆ ,ಅಂಗನವಾಡಿ, ಶಾಲೆಗಳನ್ನು ಸ್ವಚ್ಛತೆಗೆ ಆದ್ಯತೆ ನೀಡಿದ್ದರು.
ಶಫಿವುಲ್ಲಾ, ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯರು, ಚಿತ್ರದುರ್ಗ
--------------------------------------------------------
- ಅರಸಿಕೆರೆಯ ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವ ಹಿಸುತ್ತಿರುವ ಲತಾ ಎಂ.ಜಿ. ಅವರು ಮಂಡ್ಯ ಜಿಲ್ಲೆಯ ಜಿನುಕುರುಳಿ ಗ್ರಾಮದವರಾಗಿದ್ದಾರೆ. ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಹೊಳೇನರಸೀಪುರದ ಕೃಷಿ ಇಲಾಖೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಎಂ.ಸಪ್ನಾ ಅವರು ರೈತರಿಗೆ ಬೆಳೆಯ ಬಗ್ಗೆ, ನೀರಿನ ಬಳಕೆ, ರೋಗ ನಿರೋಧಕ ಔಷಧಿಗಳ ಬಗ್ಗೆ, ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನ ನೀಡುವ ಮೂಲಕ ಸರಕಾರದ ಸಬ್ಸಿಡಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ರೈತರಿಗೆ ತಲುಪಿಸುವಲ್ಲಿ ಶ್ರಮವಹಿಸುತ್ತಾರೆ. ಹೋಬಳಿ ಮಟ್ಟದಲ್ಲಿರುವ ರೈತ ಮಿತ್ರ ಕೇಂದ್ರಗಳು ಜನಪರವಾಗಿ ಕೆಲಸ ಮಾಡುವಂತೆ ಆಸಕ್ತಿ ವಹಿಸಿದ್ದಾರೆ.
- ಹಾಸನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಪ್ರಸೂತಿ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಸಾವಿತ್ರಿ, ಡಾ.ಪೂರ್ಣಿಮಾ, ತಮ್ಮ ಸೇವಾ ಮನೋಭಾವದಿಂದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
- ಸಕಲೇಶಪುರ ವಲಯ ಅರಣ್ಯ ಅಧಿಕಾರಿ ಶಿಲ್ಪಾ ಅವರು ಉತ್ತಮ ಸೇವೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿ ಪ್ರಶಸ್ತಿ ಪಡೆದಿದ್ದಾರೆ. ಕೋಲಾರ ಜಿಲ್ಲೆಯ ಇವರು, ಈ ಹಿಂದೆ ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಬಿಜೆಪಿಯ ಸರಕಾರದಲ್ಲಿ ಮಂತ್ರಿ ಆಗಿದ್ದ ಸಿ.ಟಿ.ರವಿ ಅವರೊಂದಿಗೆ ಪ್ರಾಮಾಣಿಕ ಕಾರ್ಯನಿರ್ವಹಣೆ ಸಂಬಂಧ ಘರ್ಷಣೆ ಮಾಡಿಕೊಂಡು ಅಲ್ಲಿಂದ ಸಕಲೇಶಪುರಕ್ಕೆ ವರ್ಗಾವಣೆಯಾಗಿದ್ದಾರೆ.
- ಚನ್ನರಾಯಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ ಸ್ಥಳೀಯರಾಗಿದ್ದು, ಇವರ ಸಹೋದರ ಹಾಗೂ ಸಹೋದರಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಸಹ ಶಿಕ್ಷಕಿಯಾಗಿ ಕೆಲಸ ಮಾಡಿ ಈಗ ಅಧಿಕಾರಿಯಾಗಿದ್ದಾರೆ. ಚನ್ನರಾಯಪಟ್ಟಣ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಹಿಂದುಳಿದಿದ್ದು ಮುಖ್ಯ ವಾಹಿನಿಗೆ ಬರಬೇಕೆಂದು ಶ್ರಮಪಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ.
- ಹಾಸನ ನಗರ ಸಭೆಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ಅವರು ತಮ್ಮದೆ ಕಾರ್ಯಶೈಲಿಯ ಮೂಲಕ ಜಿಲ್ಲೆಗೆ ಚಿರಪರಿಚಿತರು, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಇವರು, ಕರ್ತವ್ಯ ನಿಷ್ಠೆಯ ಜೊತೆಗೆ ಜನ ಸೇವೆಗೂ ಸೈ ಎನಿಸಿ ಕೊಂಡಿದ್ದಾರೆ. ಯಾವುದೇ ರಾಜಕಾರಣಿಗಳಿಗೆ ಬಗ್ಗದೆ ಉನ್ನತ ಅಧಿಕಾರಿಗಳ ಮುಲಾಜಿಗೆ ಒಳಗಾಗದೆ ಕಾಮಾಗಾರಿಗಳನ್ನು ಅಚ್ಚುಕಟ್ಟಾಗಿ ಮಾಡಿಸುವುದರಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ದುಡಿದ ಹಣ ಖರ್ಚುಮಾಡುವುದು ಇವರ ಹವ್ಯಾಸವಾಗಿದೆ.
- ಬೇಲೂರಿನ ತಹಶೀಲ್ದಾರ್ ಮಮತಾ ಅವರು ಶಿಸ್ತಿನ ಸಿಫಾಯಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿಯ ಕಾರ್ಯಕರ್ತರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ದಂತೆ ಮೊಕದ್ದಮೆಗಳನ್ನು ದಾಖಲಿಸಿದ್ದರು. ಪ್ರಾಮಾಣಿಕ ಅಧಿಕಾರಿ ತಾಲೂಕಿನಲ್ಲಿ ಇದ್ದಾರೆ ಎಂಬುವಂತೆ ಕೆಲಸ ಮಾಡುತ್ತಿದ್ದಾರೆ.