ಮುಖ್ಯಮಂತ್ರಿ ಆಯ್ಕೆ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ:ಸಚಿವ ಕೃಷ್ಣ ಬೈರೇಗೌಡ
ಬಳ್ಳಾರಿ : ಮುಖ್ಯಮಂತ್ರಿ ಆಯ್ಕೆ ಸೇರಿದಂತೆ ಎಲ್ಲವನ್ನೂ ಪಕ್ಷ ನಿರ್ಧಾರ ಮಾಡುತ್ತದೆ. ಕೆಲವರು ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳುತ್ತಾರೆ. ಅದಕ್ಕೆ ಅವರು ಸ್ವತಂತ್ರರು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗೋದು ಸತ್ಯ ಎಂದು ಸವದತ್ತಿ ಶಾಸಕ ವಿಶ್ವಾಸ್ ವಸಂತ ವೈದ್ಯ ನೀಡಿರುವ ಹೇಳಿಕೆ ಕುರಿತು ಮಂಗಳವಾರ ಬಳ್ಳಾರಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು " ನಾವು ಜನರಿಗೆ ಆಡಳಿತ ನೀಡಲು ಒತ್ತು ಕೊಡಬೇಕಿದೆ. ಜನರು ಕೂಡ ನಮ್ಮಿಂದ ಅದನ್ನೆ ನಿರೀಕ್ಷೆ ಮಾಡುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಇದ್ದಾರೆ. ಪಕ್ಷದ ಶಾಸಕರು ಎಲ್ಲರೂ ಸೇರಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದೇವೆ. ಅವರ ನೇತೃತ್ವದಲ್ಲೇ ನಾವು ಜನರಿಗೆ ಒಳ್ಳೆಯ ಆಡಳಿತ ಕೊಡಬೇಕು " ಎಂದು ಹೇಳಿದರು.
ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ನಾಲ್ಕು ಗೊಡೆ ಮಧ್ಯೆ ಪಕ್ಷ ಚರ್ಚೆ ಮಾಡುತ್ತದೆ. ಈಗಾಗಲೇ ಮುಖ್ಯಮಂತ್ರಿ ಇದ್ದಾರೆ, ಜನಪರವಾದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಜನರಿಗೂ ನಮಗೂ ಕೂಡ ಒಳ್ಳೆಯದಾಗಿರುತ್ತೆ. ಅದು ಬಿಟ್ಟು ಅಧಿಕಾರದ ಬಗ್ಗೆ ಚರ್ಚೆಯಾದರೆ ಒಳ್ಳೆಯದಲ್ಲ, ಇದರಿಂದ ಜನರಿಗೂ ಲಾಭವಿಲ್ಲ ಎಂದು ಅವರು ಹೇಳಿದರು.