ಸಿಎಂ ವಿರುದ್ಧದ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಎತ್ತಿಹಿಡಿದ ಹೈಕೋರ್ಟ್
ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾ
ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಆ ಮೂಲಕ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಇದೇ ವೇಳೆ ಎರಡು ವಾರಗಳ ಕಾಲ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದ್ದು, ಕಳ ನ್ಯಾಯಾಲಯದ ವಿಚಾರಣೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ.
ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ತೀರ್ಪು ನೀಡಿದೆ. ಆ ಮೂಲಕ ಮುಡಾ ವಿಚಾರದಲ್ಲಿ ರಾಜ್ಯಪಾಲರು ನಿರ್ಧಾರ ಸೂಕ್ತವಾಗಿದೆ ಎಂಬ ಅಭಿಪ್ರಾಯಕ್ಕೆ ಹೈಕೋರ್ಟ್ ಬಂದಿದೆ.
ಆದೇಶದಲ್ಲಿ ಹೈಕೋರ್ಟ್ ತಿಳಿಸಿರುವ ಅಭಿಪ್ರಾಯವೇನು?
ದೂರುದಾರರುವ ತಮ್ಮ ದೂರು ಸಲ್ಲಿಸಿ, ರಾಜ್ಯಪಾಲರಿಂದ ಅನುಮತಿ ಕೋರಿದ್ದು ಸೂಕ್ತವಾಗಿದೆ. ಈ ಪ್ರಕರಣದಲ್ಲಿ 17ಎ ಅಡಿ ಅನುಮತಿ ಅತ್ಯಗತ್ಯವಾಗಿತ್ತು. ಸೆಕ್ಷನ್ 17ಎ ಅಡಿ ಪೊಲೀಸ್ ಅಧಿಕಾರಿಯೇ ಅನುಮತಿ ಪಡೆಯಬೇಕೆಂದಿಲ್ಲ. ರಾಜ್ಯಪಾಲರು ಸಾಮಾನ್ಯ ಸಂದರ್ಭಗಳಲ್ಲಿ ಸಚಿವ ಸಂಪುಟದ ನಿರ್ದೇಶನ ಪಾಲಿಸಬೇಕು. ಅಪರೂಪದ ಸಂದರ್ಭದಲ್ಲಿ ರಾಜ್ಯಪಾಲರು ಸ್ವಂತ ವಿವೇಚನೆ ಬಳಸಬಹುದು ಎಂದು ತಿಳಿಸಿದೆ.
ಈ ಪ್ರಕರಣ ಸ್ವಂತ ವಿವೇಚನೆ ಬಳಸಲು ಅರ್ಹವಾದ ಪ್ರಕರಣ. ಸ್ವತಂತ್ರ ವಿವೇಚನೆ ಬಳಸಿದ ರಾಜ್ಯಪಾಲರ ಕ್ರಮದಲ್ಲಿ ತಪ್ಪು ಕಂಡಿಲ್ಲ. ನಿರ್ಧಾರ ಕೈಗೊಳ್ಳುವ ಪ್ರಾಧಿಕಾರದ ಕಡತದಲ್ಲಿ ಕಾರಣಗಳಿದ್ದರೆ ಸಾಕು. ಅದರಲ್ಲೂ ಉನ್ನತ ಪ್ರಾಧಿಕಾರವು ನೀಡುವ ಕಾರಣ ಆದೇಶದ ಭಾಗವಾಗಲಿದೆ. ಆಕ್ಷೇಪಣೆಯ ರೂಪದಲ್ಲಿ ಕಾರಣಗಳನ್ನು ಹೈಕೋರ್ಟ್ ಗೆ ಸಲ್ಲಿಸಬೇಕಿಲ್ಲ. ರಾಜ್ಯಪಾಲರ ಆದೇಶದಲ್ಲಿ ವಿವೇಚನೆ ಬಳಸಿಲ್ಲ ಎಂಬುವಂತಿಲ್ಲ. ಸಂಪೂರ್ಣ ವಿವೇಚನೆ ಬಳಸಿಯೇ ಆದೇಶ ನೀಡಿದ್ದಾರೆ. ಸೆಕ್ಷನ್ 17ಎ ಅಡಿಯಲ್ಲಿ ಆದೇಶಕ್ಕೂ ಮುನ್ನ ದೂರುದಾರರ ಅಹವಾಲು ಆಲಿಸಬೇಕೆಂದಿಲ್ಲ. ರಾಜ್ಯಪಾಲರ ತರಾತುರಿಯ ಕ್ರಮ ಆದೇಶವನ್ನು ನಿಷ್ಪಲಗೊಳಿಸಿಲ್ಲ. ರಾಜ್ಯಪಾಲರು ಕೇವಲ ಸೀಮಿತ ಅನುಮತಿಯಷ್ಟೇ ನೀಡಿದ್ದಾರೆ. ಬಿಎನ್ ಎಸ್ಎಸ್ 218 ಅಡಿ ಪೂರ್ವಾನುಮತಿ ನೀಡಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.