ಮಲ ಹೊರುವ ಪದ್ಧತಿ ಇನ್ನೂ ಜೀವಂತ; ಆರೋಪಿಗಳಿಗೆ ಶಿಕ್ಷೆ ಏಕೆ ಆಗಿಲ್ಲ?: ಹೈಕೋರ್ಟ್
ಬೆಂಗಳೂರು: ಮಲ ಹೊರುವುದು ಹಾಗೂ ಮಲ ತೆಗೆಯುವ ಪದ್ಧತಿಯನ್ನು ಜೀವಂತವಾಗಿದ್ದರೂ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ ಏಕೆ? ಇದೊಂದು ರೀತಿಯಲ್ಲಿ ನ್ಯಾಯದ ಅಣಕ ಎಂದು ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
‘ಮಲ ಹೊರುವ ಪದ್ಧತಿ ಜೀವಂತ’ ಎಂಬ ಮಾಧ್ಯಮ ವರದಿಯ ಆಧರಿಸಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ನ್ಯಾಯಪೀಠವು, ಮಲ ಹೊರುವ ಪದ್ಧತಿ ನಿಷೇಧಿಸಿ ಕಾಯಿದೆಯನ್ನು ಜಾರಿಗೆ ತಂದರೂ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳದವರ ವಿರುದ್ಧ ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ? ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ ಏಕೆ? ಇದಕ್ಕೆ ಪರಿಹಾರ ಏನು?. ಇದೆಂಥ ನ್ಯಾಯದ ಅಣಕ ನಾವು ಪರಿಹಾರದ ಬಗ್ಗೆ ಮಾತನಾಡುತ್ತಿಲ್ಲ. ಒಂದೇ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ ಏಕೆ ಎಂದು ನ್ಯಾಯಪೀಠವು ಪ್ರಶ್ನಿಸಿತು.
ಎಲ್ಲದಕ್ಕೂ ನ್ಯಾಯಾಲಯವೇ ಏಕೆ ಮುಂದಾಗಬೇಕು? ನ್ಯಾಯಾಲಯ ಸ್ಥಾಪನೆಯ ಉದ್ದೇಶ ಇದಲ್ಲ. ಇದನ್ನು ನಾವು ಮಾಡಿದರೆ ನ್ಯಾಯಾಲಯ ಅಂಕೆ ಮೀರಿದೆ ಎನ್ನುತ್ತೀರಿ. ನಾವು ನಿರ್ದೇಶನವನ್ನು ಏಕೆ ನೀಡಬೇಕು? ಸರಕಾರಕ್ಕೆ ಏಕೆ ಆಗುವುದಿಲ್ಲ? ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.
ಮಲ ಹೊರುವುದಕ್ಕೆ ಎಸ್ಸಿ ಜನರನ್ನು ಬಳಕೆ ಮಾಡಿದರೆ ಎಸ್ಸಿ ಮತ್ತು ಎಸ್ಟಿಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದ್ದರೂ ಅದನ್ನು ಬಳಕೆ ಮಾಡದಿರುವುದಕ್ಕೆ ನ್ಯಾಯಾಲಯ ಆಕ್ಷೇಪಿಸಿತು. ಈ ವಿಚಾರದ ಕುರಿತು ಅಮಿಕಸ್ ಕ್ಯೂರಿ ಶ್ರೀಧರ್ ಪ್ರಭು ನ್ಯಾಯಾಲಯದ ಗಮನಸೆಳೆದರು.
2023ರ ಡಿ.23ರಂದು ಮಲಗುಂಡಿ ಸ್ವಚ್ಛಗೊಳಿಸುವಾಗ ಕಾರ್ಮಿಕರು ಮೃತಪಟ್ಟ ಪ್ರಕರಣದಲ್ಲಿ ಆರೋಪಿತರ ವಿರುದ್ಧ ಎಸ್ಸಿ/ಎಸ್ಟಿ ಕಾಯಿದೆಯ ಸೆಕ್ಷನ್ 3(ಜೆ) ಅನ್ವಯಿಸಲಾಗಿಲ್ಲ. ಈ ವಿಚಾರದ ಕುರಿತು ಸಂಬಂಧಪಟ್ಟವರು ಗಮನಹರಿಸಬೇಕು ಎಂದು ನ್ಯಾಯಾಲಯ ಹೇಳಿತು.
ಅಲ್ಲದೆ, ನ್ಯಾಯಪೀಠವು, ಇದಕ್ಕೆ ದೊಡ್ಡ ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ನಿಧಿ ಬಳಕೆ ಮಾಡಬಹುದು. ಯಾಂತ್ರಿಕ ವ್ಯವಸ್ಥೆಗೆ ಜೋತು ಬೀಳುವ ಅಥವಾ ಸರಕಾರಿ ಆಡಳಿತದಲ್ಲಿನ ಮಂದಗತಿಗೆ ಆಸ್ಪದ ನೀಡಬಾರದು ಎಂದಿದೆ.