‘ಹಾವು ಕಡಿತಕ್ಕೆ ಚಿಕಿತ್ಸೆ’ ಒದಗಿಸಲು ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರಕಾರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಸರಕಾರವು ಹಾವು ಕಡಿತ ಪ್ರಕರಣ ಮತ್ತು ಮರಣವನ್ನು ಅಧಿಸೂಚಿತ ರೋಗವೆಂದು ಘೋಷಿಸಿದ್ದು, ಹಾವು ಕಡಿತದ ಪ್ರಕರಣಗಳಲ್ಲಿ ರೋಗಿಗಳಿಗೆ ವಿವಿಧ ಹಂತಗಳಲ್ಲಿ ಸೂಕ್ತ ಚಿಕಿತ್ಸೆ ನೀಡಲು ಮಾರ್ಗಸೂಚಿಯನ್ನು ಹೊರಡಿಸಿದೆ.
ರಾಜ್ಯದ ಎಲ್ಲ ತಾಲೂಕು ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳನ್ನು ಹಾಗೂ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಹಾವು ಕಡಿತದ ಪ್ರಕರಣಗಳು ಕಂಡು ಬಂದಲ್ಲಿ ಆಶಾ ಕಾರ್ಯಕರ್ತೆಯರು ತಕ್ಷಣ ರೋಗಿ ಹಾಗೂ ಸಂಬಂಧಿಕರೊಂದಿಗೆ ಸಮಲೋಚನೆ ನಡೆಸಿ, ಚಿಕಿತ್ಸೆಗಾಗಿ ಮನವೊಲಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ತಿಳಿಸಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಾವು ಕಡಿತ ಪ್ರಕರಣಗಳನ್ನು ಕಂಡು ಬಂದಲ್ಲಿ ತಕ್ಷಣವೇ ರೋಗಿಯ ಲಕ್ಷಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಪ್ರಥಮ ಚಿಕಿತ್ಸೆ ನೀಡಿ, ರೋಗಿಯೊಂದಿಗೆ ಸಮಾಲೋಚನೆ ನಡೆಸಬೇಕು ಎಮದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಹಾವಿನ ನಂಜಿನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ರೋಗಿಯ ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು ಉಚಿತವಾಗಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ, ಉನ್ನತ ಚಿಕಿತ್ಸೆಗಾಗಿ ತಾಲ್ಲೂಕು/ಜಿಲ್ಲಾ ಆಸ್ಪತ್ರೆಗೆ ಉಚಿತ ಆಂಬ್ಯುಲೆನ್ಸ್ ನಲ್ಲಿ ಕಳುಹಿಸಬೇಕು ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ.
ತಮ್ಮ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಂಭವಿಸುವ ಹಾವು ಕಡಿತ ಪ್ರಕರಣಗಳು ವರದಿಯಾಗುವ ಪ್ರಮಾಣಕ್ಕೆ ಅನುಗುಣವಾಗಿ ಸಾಕಷ್ಟು ಔಷಧಿಯ ದಾಸ್ತಾನುವನ್ನು ಇಟ್ಟುಕೊಳ್ಳುವುದು. ತಮ್ಮ ಆರೋಗ್ಯ ಕೇಂದ್ರದ ಸಮೀಪದಲ್ಲಿರುವ ಹಾವು ಕಡಿತ ಚಿಕಿತ್ಸಾ ಕೇಂದ್ರಗಳ ದೂರವಾಣಿ ಸಂಖ್ಯೆಯ ಸಹಿತ ಪಟ್ಟಿಯನ್ನು ತಯಾರಿಸಿ ಸೂಚನಾ ಫಲಕದಲ್ಲಿ ನಮೂದಿಸಬೇಕು.
ಹಾವು ಕಡಿತ ನಿಯಂತ್ರಣ, ಹಾವು ಕಡಿತ ಚಿಕಿತ್ಸೆಯ ಬಗ್ಗೆ ಐಇಸಿ ಫಲಕಗಳನ್ನು ತಮ್ಮ ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಹಾಗೂ ಇತರೆ ಸೂಕ್ತ ಸ್ಥಳಗಳಲ್ಲಿ ಎಲ್ಲರಿಗೂ ಕಾಣಿಸುವ ರೀತಿಯಲ್ಲಿ ಹಾಕಬೇಕು ಎಂದು ತಿಳಿಸಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ತಾಲೂಕು ವೈದ್ಯಾಧಿಕಾರಿಗಳು ಆರೋಗ್ಯ ಕಾರ್ಯಕರ್ತರಿಗೆ ಹಾವು ಕಡಿತ ತಡೆಗಟ್ಟುವ ಹಾಗೂ ಚಿಕಿತ್ಸೆ ನೀಡುವ ಬಗ್ಗೆ ತರಬೇತಿ ನೀಡಿ ಬೇರೆ ಇಲಾಖೆಗಳ ಸಹಯೋಗದೊಂದಿಗೆ ಹಾವು ಕಡಿತ ನಿಯಂತ್ರಣದ ಬಗ್ಗೆ ಐಇಸಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ತಿಳಿಸಲಾಗಿದೆ.
ತಮ್ಮ ಜಿಲ್ಲೆಯಲ್ಲಿರುವ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ (ವೈದ್ಯಕೀಯ ಕಾಲೇಜುಗಳನ್ನು ಒಳಗೊಂಡಂತೆ) ಹಾವು ಕಡಿತದ ಹಾಗೂ ಮರಣದ ಎಲ್ಲಾ ಪ್ರಕರಣಗಳು ಐಎಚ್ಐಪಿ ಪೋರ್ಟಲ್ನಲ್ಲಿ ವರದಿಯಾಗಿರುವ ಬಗ್ಗೆ ಮರು ಪರಿಶೀಲಿಸಬೇಕು. ಒಂದು ವೇಳೆ ಹಾವು ಕಡಿತದಿಂದ ರೋಗಿಯು ಮರಣ ಹೊಂದಿದಲ್ಲಿ ಜಿಲ್ಲ ಆಡಿಟ್ ಸಮಿತಿಯನ್ನು ರಚಿಸಿ, ಸಂಭವಿಸಿದ ಸಾವುಗಳನ್ನು ಆಡಿಟ್ ಮಾಡಿ ವಿವರವಾದ ವರದಿಯನ್ನು ಅದಷ್ಟು ಬೇಗ ರಾಜ್ಯಕ್ಕೆ ಸಲ್ಲಿಸಬೇಕು.
ಒಂದು ವೇಳೆ ರೋಗಿಯು ಸಂರ್ಪಕಿಸುವ ಆರೋಗ್ಯ ಕೇಂದ್ರವು ಹಳ್ಳಿಗಳಿಂದ ಪ್ರಯಾಣದ ಸಮಯ 30 ನಿಮಿಷಕ್ಕಿಂತ ಹೆಚ್ಚು ಇದ್ದಲ್ಲಿ, ರೋಗಿಯು ತಮ್ಮ ಹಳ್ಳಿಯಿಂದ 30 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ತಲುಪಬಹುದಾದಂತಹ ಸಮುದಾಯ ಅರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳಾಗಿ ಗುರುತಿಸಿ, ಆ ಕೇಂದ್ರವು ಹಾವು ಕಡಿತ ಚಿಕಿತ್ಸಾ ಕೇಂದ್ರಗಳಾಗಿ ಕರ್ತವ್ಯ ನಿರ್ವಹಿಸಲು ಸೂಕ್ತ ಕ್ರಮಗಳನ್ನು ಕೈಗೊಂಡು ರಾಜ್ಯಕ್ಕೆ ವರದಿ ಸಲ್ಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.
2024ರ ಫೆ.8ರಂದು ನಡೆದ ಹಾವು ಕಡಿತ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ತರಬೇತಿಗೆ ಹಾಜರಾದ ಫಿಜಿಪಿಯನ್ಗಳನ್ನು ಆಯಾ ಜಿಲ್ಲೆಯ ಹಾವು ಕಡಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳಾಗಿ ಗುರುತಿಸಲಾಗಿದೆ.
ಈ ಪಿಜಿಪಿಯನ್ಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಸರ್ವೇಕ್ಷಾಣಾಧಿಕಾರಿಗಳ ಸಂಯೋಜನೆಯೊಂದಿಗೆ ಕಾಲಕಾಲಕ್ಕೆ ಇತರೆ ತಜ್ಞರು, ವೈದ್ಯಾಧಿಕಾರಿಗಳು ಹಾಗೂ ಇತರ ಆರೋಗ್ಯ ಕಾರ್ಯಕರ್ತರುಗಳಿಗೆ ಹಾವು ಕಡಿತ ತಡೆಗಟ್ಟುವ ಹಾಗೂ ಚಿಕಿತ್ಸೆ ನೀಡುವ ಬಗ್ಗೆ ತರಬೇತಿ ನೀಡಬೇಕು.
ಮಕ್ಕಳಲ್ಲಿ ಹಾಗೂ ಗರ್ಭಿಣಿ ಸ್ತ್ರೀಯರಲ್ಲಿ ಹಾವು ಕಡಿತ ಪ್ರಕರಣಗಳು ಕಂಡು ಬಂದಲ್ಲಿ, ಇತರರಿಗೆ ನೀಡುವಂತೆ ಅವರಿಗೂ ಪ್ರಾಥಮಿಕ ಚಿಕಿತ್ಸೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.