ರಾಜ್ಯ ಸರಕಾರ ಮಕ್ಕಳ ಮನಸ್ಸಿನಲ್ಲಿ ಸಂಘರ್ಷ ಉಂಟು ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ : ಬೊಮ್ಮಾಯಿ
ಘೋಷವಾಕ್ಯ ಬದಲಾವಣೆಗೆ ಅಕ್ರೋಶ ವ್ಯಕ್ತಪಡಿಸಿದ ಮಾಜಿ ಸಿಎಂ
ಬೆಂಗಳೂರು: ರಾಜ್ಯ ಸರಕಾರ ವಸತಿ ಶಾಲೆಗಳಲ್ಲಿ ಇದುವರೆಗೂ ಇದ್ದ ʼಜ್ಞಾನ ದೇಗುಲವಿದು ಕೈಮುಗಿದು ಬಾʼ ಎಂಬ ವಾಕ್ಯವನ್ನು ಜ್ಞಾನ ದೇಗುಲವಿದು ಪ್ರಶ್ನೆ ಮಾಡಿ ಎಂದು ಬರೆಸಿ ಮಕ್ಕಳ ಮನಸಲ್ಲಿ ಸಂಘರ್ಷ ಮೂಡಿಸುವ ಕೆಲಸ ಮಾಡಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರಕಾರ ಸಮಾಜದಲ್ಲಿ ಮಕ್ಕಳಿಂದ ಹಿಡಿದು ಎಲ್ಲರಲ್ಲಿಯೂ ಸಂಘರ್ಷ ಉಂಟು ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸರಕಾರದ ವಸತಿ ಶಾಲೆಗಳಲ್ಲಿ ಅಕ್ಕಿ ಸಿಗುತ್ತಿಲ್ಲ. ಅದೇ ಕಾರಣಕ್ಕೆ ನಾವು ಖಜಾನೆ ಖಾಲಿ ಇದೆ ಅಂತ ಹೇಳುತ್ತಿದ್ದೇವೆ. ಅಭಿವೃದ್ಧಿಗೆ ಹಣ ಕೊಡುವುದಿಲ್ಲ. ಹಸಿವು ಮುಕ್ತ ಕರ್ನಾಟಕ ಅಂತ ಬೋರ್ಡ್ ಹಾಕಿಕೊಂಡಿದ್ದಾರೆ. ಮೊದಲು ನಿಮ್ಮ ಶಾಲಾ ಮಕ್ಕಳಿಗೆ ಅನ್ನ ಕೊಡಿ ವಿದ್ಯೆ ಕೊಡಿ ಎಂದರು.
ಬಡವರಿಗೆ ಅಕ್ಕಿಯನ್ನು ನರೇಂದ್ರ ಮೋದಿ ಸರಕಾರ ಕೊಡುತ್ತಿದೆ. ಅದನ್ನೂ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ವಿದ್ಯಾರ್ಥಿಗಳಿಗೆ ನೀಡುವ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಗೆಲ್ಲಿಸಲು ಜನ ತೀರ್ಮಾನಿಸಿದ್ದಾರೆ
ರಾಜ್ಯದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಎಂಪಿ ಸ್ಥಾನ ಗೆಲ್ಲಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ಫಲಿತಾಂಶ ಬರಲಿದೆ. ಸತ್ಯ ಏನಿದೆ ಅಂತ ಗೊತ್ತಾಗಲಿದೆ. ಅವರಿಗೂ ಸತ್ಯ ಗೊತ್ತಿದೆ. ಅದಕ್ಕಾಗಿ ಅವರು ಕೇಂದ್ರ ರಾಜ್ಯ ಸರಕಾರದ ನಡುವೆ ಕಂದಕ ಸೃಷ್ಟಿಸಲು ಮುಂದಾಗಿದ್ದಾರೆ. ಈಗಾಗಲೇ ಭಾರತದ ಜನರು ಬಿಜೆಪಿಯನ್ನು ಗೆಲ್ಲಿಸಲು ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ನ ನಾಯಕರಾದ ಕಮಲ್ ನಾಥ್ ಸೇರಿದಂತೆ ಅನೇಕ ಹಿರಿಯ ನಾಯಕರು ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ಹೇಳಿದರು.