ರೇಣುಕಾಸ್ವಾಮಿ ಹತ್ಯೆ ಪ್ರಕರಣ : ದರ್ಶನ್ ಸೇರಿ ಹಲವರ ಜಾಮೀನು ರದ್ದು ಕೋರಿ ಸುಪ್ರೀಂ ಕದ ತಟ್ಟಿದ ಸರಕಾರ

ದರ್ಶನ್ (PC:x/@dasadarshan)
ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಏಳು ಮಂದಿಯ ಜಾಮೀನು ರದ್ದುಕೋರಿ ಸುಪ್ರೀಂಕೋರ್ಟ್ನಲ್ಲಿ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿದ್ದು, ಜ.24ರಂದು ವಿಚಾರಣೆ ನಡೆಯಲಿದೆ.
ಪ್ರಕರಣ ಸಂಬಂಧ 1492 ಪುಟಗಳ ಕಡತವನ್ನು ರಾಜ್ಯ ಸರಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಕೆ ಮಾಡಿದ್ದು, ನ್ಯಾಯಮೂರ್ತಿಗಳಾದ ಜೆ.ಬಿ.ಪರಿದಿವಾಲಾ ಹಾಗೂ ಆರ್.ಮಹದೇವನ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಈ ವಿಚಾರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಹತ್ಯೆ ಪ್ರಕರಣದಲ್ಲಿ 17 ಮಂದಿ ಆರೋಪಿಗಳಿಗೂ ಜಾಮೀನು ದೊರೆತಿದ್ದು, ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಎನ್ನಲಾದ ದರ್ಶನ್, ನಾಗರಾಜು, ಅನುಕುಮಾರ್, ಲಕ್ಷ್ಮಣ್, ಪವಿತ್ರಾಗೌಡ, ಜಗದೀಶ್ ಹಾಗೂ ಪ್ರದೂಷ್ ಅವರಿಗೆ ಹೈಕೋರ್ಟ್ ನೀಡಿರುವ ಜಾಮೀನು ರದ್ದುಕೋರಿ ಮೇಲ್ಮನವಿ ಸಲ್ಲಿಸಲಾಗಿದೆ.
ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಹಾಗೂ ದೂರಿನ ಪ್ರತಿ, ಮರಣೋತ್ತರ ಪರೀಕ್ಷೆ ವರದಿ, ಆರೋಪಿಗಳ ಗ್ರೌಂಡ್ಸ್ ಆಫ್ ಅರೆಸ್ಟ್ ಕುರಿತು ನೀಡಿರುವ ಪ್ರತಿ, ಪ್ರತ್ಯಕ್ಷದರ್ಶಿಗಳಾದ ಸಾಕ್ಷಿ ಹೇಳಿಕೆಗಳು, ಮರಣೋತ್ತರ ವರದಿ ಮೇಲೆ ವೈದ್ಯರಿಂದ ಪಡೆದ ಹೆಚ್ಚುವರಿ ಅಭಿಪ್ರಾಯ ವರದಿ, ಜಾಮೀನು ಅರ್ಜಿ ವಜಾಗೊಳಿಸಿದ ಆದೇಶ ಪ್ರತಿ, ದರ್ಶನ್ಗೆ ನೀಡಿದ್ದ ಮಧ್ಯಂತರ ಜಾಮೀನು ಹಾಗೂ ಅವರ ಅನಾರೋಗ್ಯ ಸಂಬಂಧಿಸಿದ ವೈದ್ಯರ ವರದಿ ಸೇರಿದಂತೆ ಹಲವು ಅಂಶಗಳು ಒಳಗೊಂಡಿರುವ ಕಡತವನ್ನು ನ್ಯಾಯವಾದಿ ಅನಿಲ್ ನಿಶಾನಿ ಮುಖಾಂತರ ರಾಜ್ಯ ಪ್ರಾಸಿಕ್ಯೂಷನ್ ಸುಪ್ರೀಂಗೆ ಮೇಲ್ಮನವಿ ಸಲ್ಲಿಕೆ ಮಾಡಿದೆ.