ಪತ್ರಿಕಾ ರಂಗದಲ್ಲಿ ಬ್ರಾಹ್ಮಣರೇ ಹೆಚ್ಚು: ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು
ಬಿ.ರಾಚಯ್ಯ ದತ್ತಿ ಪ್ರಶಸ್ತಿ ಪ್ರದಾನ
ಬೆಂಗಳೂರು, ಸೆ.13: ‘ಪತ್ರಿಕಾ ರಂಗದಲ್ಲಿ ಯಾವ ಯಾವ ಜಾತಿ ಧರ್ಮದವರು ಎಷ್ಟು ಜನರಿದ್ದಾರೆ ಎಂಬುದರ ಕುರಿತು ಸಮೀಕ್ಷೆ ನಡೆಸಿದರೆ ಬ್ರಾಹ್ಮಣರೇ ಹೆಚ್ಚು ಮಂದಿ ಸಿಗುತ್ತಾರೆ’ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ಗಾಂಧಿಭವನದಲ್ಲಿ ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ‘ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ’ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿ.ರಾಚಯ್ಯ ದತ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಪತ್ರಿಕೆ ಪರಿಪೂರ್ಣ ಅನ್ನಿಸಬೇಕಾದರೆ ಎಲ್ಲ ಜಾತಿ, ಧರ್ಮದ ಅವಲೋಕನಗಳನ್ನು ಅದು ಒಳಗೊಂಡಿರಬೇಕು. ಪತ್ರಿಕಾ ರಂಗದಲ್ಲಿ ಮೀಸಲಾತಿ ಕೊಡಬೇಕು ಎಂದರು.
ಗಾಂಧಿಯ ಹರಿಜನ, ಯಂಗ್ ಇಂಡಿಯಾ ಪತ್ರಿಕೆಗಳ ಕುರಿತು ಚರ್ಚೆ ನಡೆದಷ್ಟು ಅಂಬೇಡ್ಕರ್ ಅವರ ಪತ್ರಿಕೆಗಳ ಕುರಿತು ನಡೆದಿಲ್ಲ. ಒಂದರಿಂದ ಹತ್ತನೆ ತರಗತಿಯವರೆಗೆ ಸಂವಿಧಾನದ ಒಂದು ಪಠ್ಯ ಇರಬೇಕು ಎಂದ ಅವರು, ಸಂಪಾದಕರ ಜಾತಿ ಮೇಲೆ ಪತ್ರಿಕೆಯನ್ನು ಅಳೆಯಬಾರದು ಎಂದು ಕಿವಿಮಾತು ಹೇಳಿದರು.
ಬಹಳಷ್ಟು ಜನರಿಗೆ ಸೈದ್ಧಾಂತಿಕ ಬದ್ದತೆ ಇದೆ. ಬದುಕಿಗಾಗಿ ಕೆಲವರು ಬದ್ಧತೆಯನ್ನು ರಾಜಿ ಮಾಡಿಕೊಳ್ಳುತ್ತಾರೆ. ಆದರೆ ನನ್ನ ವೃತ್ತಿಯಲ್ಲಿ ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡುವ ಪ್ರಸಂಗ ಯಾವತ್ತು ಬಂದಿಲ್ಲ ಎಂದು ಅವರು ಹೇಳಿದರು.
ಬಿ.ರಾಚಯ್ಯ ಅವರ ರಾಜಕೀಯ ಪ್ರವೇಶ ಸೋಶಿಯಲಿಸ್ಟ್ ಪಕ್ಷದಿಂದ ಪ್ರಾರಂಭವಾಗಿತ್ತು. ಅವರು ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಅರಸು ಅವರನ್ನು ಎಲ್ಲರೂ ಬಿಟ್ಟು ಹೋದಾಗ ರಾಚಯ್ಯ ಅವರ ಜತೆಗೆ ನಿಂತಿದ್ದರು ಎಂದು ಅವರು ನೆನಪಿಸಿಕೊಂಡರು.
ದಲಿತ ಸಂಪಾದಕರ ಸಂಘ ಬಿ.ರಾಚಯ್ಯ ಅವರ ಹೆಸರಿನ ಪ್ರಶಸ್ತಿಯನ್ನು ನೀಡುತ್ತಿದೆ. ಹಾಗೆಯೇ ಅವರ ಕುರಿತಾದ ಸಂಕ್ಷಿಪ್ತ ಒಂದು ಪುಸ್ತಕವನ್ನೂ ಹೊರತರಬೇಕು ಎಂದು ದಿನೇಶ್ ಅಮೀನ್ ಮಟ್ಟು ಸಲಹೆ ನೀಡಿದರು.