ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
"ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಹಿಟ್ಲರ್ ಆಗಿದ್ದಾರೆ"
ಶೋಭಾ ಕರಂದ್ಲಾಜೆ
ಬೆಗಳೂರು : ಕರ್ನಾಟಕ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಹಿಟ್ಲರ್ ಆಗಿದ್ದಾರೆ. ಬಿಜೆಪಿಯ ಸಂಸದರು ಮತ್ತು ಶಾಸಕರ ಮೇಲೆ ಎಫ್ಐಆರ್ಗಳು ದಾಖಲಾಗುತ್ತಿವೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಪಕ್ಷದ ನಾಯಕ ಹಾಗೂ ಕೇಂದ್ರದ ಸಚಿವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.
ಗುರುವಾರ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ತೇಜಸ್ವಿ ಸೂರ್ಯರ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ. ಶಾಸಕರಾದ ಹರೀಶ್ ಪೂಂಜಾ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಭರತ್ ಶೆಟ್ಟಿ ಹೀಗೆ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಹತ್ತಿಕ್ಕುವ, ಅವರ ಧ್ವನಿ ಅಡಗಿಸುವ ಕೆಲಸವನ್ನು ಈ ಸರಕಾರ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನೀವೇನು ಮಾಡಲು ಹೊರಟಿದ್ದೀರಿ?: ಕರ್ನಾಟಕವನ್ನು ನೀವೇನು ಮಾಡಲು ಹೊರಟಿದ್ದೀರಿ? ನಾಗಮಂಗಲದಲ್ಲಿ ಘಟನೆ ನಡೆಯಿತು. ಇತಿಹಾಸದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನನ್ನು ಪೊಲೀಸ್ ವ್ಯಾನಿನಲ್ಲಿ ಕರೆದುಕೊಂಡು ಹೋಗಿ ವಿಸರ್ಜನೆ ಮಾಡುವ ಘಟನೆ ನಡೆದಿದೆ. ಯಾಕಾಗಿ ಹೀಗಾಗಿದೆ? ಎಂದು ಪ್ರಶ್ನಿಸಿದರು.
ನಾವೇನು ತಪ್ಪು ಮಾಡಿದ್ದೇವೆ: ಆರ್.ಅಶೋಕ್ ಮತ್ತು ನಾನು ಮಾಡಿದ ತಪ್ಪೇನು? ಯಾವ ಅಪರಾಧಕ್ಕಾಗಿ ನೀವು ಎಫ್ಐಆರ್ ಹಾಕಿದ್ದೀರಿ? ನಾವು ನಿಮ್ಮನ್ನು ಕೇಳಿದ್ದೇ ನಮ್ಮ ಅಪರಾಧ. ನಿಮ್ಮನ್ನು ಪ್ರಶ್ನಿಸಿದ್ದೇ ಅಪರಾಧ. ಇವತ್ತು ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವುದಕ್ಕಾಗಿ ಪ್ರಜಾತಂತ್ರವನ್ನು ಕಗ್ಗೊಲೆ ಮಾಡುವ ಕೆಲಸ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್ ಸರಕಾರ ಬಂದ ನಂತರ ದ್ವೇಷದ ರಾಜಕಾರಣ ಆರಂಭಿಸಿದೆ. ನೀವು ಕೇಸ್ ಹಾಕಿ ನಾವು ಓಡಿಹೋಗುವುದಿಲ್ಲ. ನಾವು ಹೋರಾಟದಿಂದಲೇ ಬಂದವರು. ಇವನ್ನೆಲ್ಲ ಕಾನೂನು ಮೂಲಕವೇ ಎದುರಿಸುತ್ತೇವೆ. ಅಧಿಕಾರ ಶಾಶ್ವತವಲ್ಲ, ನೀವು ಅಧಿಕಾರದಿಂದ ಕೆಳಗೆ ಇಳಿಯುತ್ತೀರಿ. ಜನ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ’ ಎಂದು ಹೇಳಿದರು.