ಸದ್ಯಕ್ಕೆ ನಂದಿನಿ ಹಾಲಿನ ದರ ಏರಿಕೆ ಇಲ್ಲ: ಸಚಿವ ಕೆ.ವೆಂಕಟೇಶ್ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ನ.10: ‘ರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹಾಲಿನ ದರ ಏರಿಕೆ ಮಾಡುವ ಯಾವುದೇ ಚಿಂತನೆ ಸರಕಾರದ ಮುಂದೆ ಇಲ್ಲ’ ಎಂದು ಪಶುಸಂಗೋಪನೆ ಮತ್ತು ರೇμÉ್ಮ ಸಚಿವ ಕೆ.ವೆಂಕಟೇಶ್ ಎಂದು ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಹಾಲು ಒಕ್ಕೂಟದವರು ನಮಗೆ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ನಮಗೆ ರೈತರು, ಗ್ರಾಹಕರ ಹಿತ ಮುಖ್ಯ. ಹಾಗಾಗಿ ಹಾಲಿನ ದರ ಏರಿಕೆ ತೀರ್ಮಾನ ಮಾಡಿಲ್ಲ ಎಂದು ತಿಳಿಸಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದೆ. ಆದರೂ ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ಹಾಲಿನ ದರ ಏರಿಕೆ ಮಾಡುವ ಚಿಂತನೆ ಇಲ್ಲ ಎಂದ ಅವರು, ರಾಜ್ಯದಲ್ಲಿ ಹಾಲಿನ ಕೊರತೆ ಇಲ್ಲ. ಸಾಕಷ್ಟು ಹಾಲು ಉತ್ಪಾದನೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ಪಶು ಆಹಾರ ಘಟಕಗಳ ಮೂಲಕ ಪಶು ಆಹಾರ ತಯಾರಿಕೆಗಾಗಿ ಒಂದು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಬೆಂಬಲ ಬೆಲೆ ಮೂಲಕ 160 ರೂ.ನಂತೆ ಉತ್ತೇಜನ ದರ ನೀಡಿ ಪ್ರತಿ ಕ್ವಿಂಟಾಲ್ಗೆ 2250 ರೂ. ನಂತೆ ಖರೀದಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಆರ್ಥಿಕ ಇಲಾಖೆಯು ಕೆ.ಟಿ.ಪಿ.ಪಿ. ಕಾಯ್ದೆ 4ಜಿ ಅಡಿಯಲ್ಲಿ ವಿನಾಯಿತಿ ನೀಡಲಾಗಿದ್ದು, ಇದರಿಂದ ರಾಜ್ಯದಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಖರೀದಿಸುವುದರಿಂದ ರೈತರಿಗೆ ಹೆಚ್ಚಿನ ಬೆಲೆ ದೊರಕಿದಂತಾಗುತ್ತದೆ ಎಂದರು.