ʼವಿಪಕ್ಷ ನಾಯಕನಿಲ್ಲʼ: ಕರ್ನಾಟಕದ ಜನತೆ ಮರೆತಿರುವ ಸಂಗತಿಯನ್ನು ಮತ್ತೆ ನೆನಪಿಸುತ್ತಿದ್ದೇವೆ ಎಂದು ಪೋಸ್ಟರ್ ಹಂಚಿಕೊಂಡ ಕಾಂಗ್ರೆಸ್
ಬೆಂಗಳೂರು: ʼʼಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನಿಲ್ಲ ಎಂಬ ಸಂಗತಿಯನ್ನು ಜನತೆ ಹಾಗೂ ಬಿಜೆಪಿ ಪಕ್ಷ ಬಹುತೇಕ ಮರೆತೇ ಹೋಗಿದ್ದಾರೆʼʼ ಎಂದು ಕಾಂಗ್ರೆಸ್ ಹೇಳಿದೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಕಾಂಗ್ರೆಸ್, ʼʼಕರ್ನಾಟಕದ ಜನತೆ ಮರೆತಿರುವ ಸಂಗತಿಯನ್ನು ಮತ್ತೆ ನೆನಪಿಸುತ್ತಿದ್ದೇವೆ, ಪ್ರಮುಖ ಸಾಂವಿಧಾನಿಕ ಹುದ್ದೆಯಾದ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನ ಖಾಲಿ ಇದೆʼʼ ಎಂದು ಉಲ್ಲೇಖಿಸಿದೆ.
ʼʼಪ್ರಮುಖ ಸಾಮವಿಧಾನಿಕ ಹುದ್ದೆಯೊಂದನ್ನು ಖಾಲಿ ಬಿಟ್ಟಿರುವ ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಅಪಚಾರ ಮಾಡುತ್ತಿದೆʼʼ ಎಂದು ಕಾಂಗ್ರೆಸ್ ಕಿಡಿಕಾರಿದೆ.
ʼʼಬಿಜೆಪಿಗೆ ಆಡಳಿತದಲ್ಲಿ ಮಾತ್ರ ಅಸಾಮರ್ಥ್ಯವಿರುವುದಲ್ಲ, ಆಂತರಿಕ ಕಲಹ ನಿಭಾಯಿಸುವುದರಲ್ಲಿ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದರಲ್ಲೂ ಅಸಮರ್ಥವಾಗಿದೆ. ಬಿಜೆಪಿ ವಿರೋಧ ಪಕ್ಷದ ನಾಯಕನ ಆಯ್ಕೆಗೆ ನಿಮ್ಮ ವರಿಷ್ಠರಿಗೆ "ಸೂಕ್ತ ಸಮಯ" ಬರಲಿಲ್ಲವೇ? ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಸಮಯವಿರುವ ಹೈಕಮಾಂಡಿಗೆ ಸ್ವಂತ ಪಕ್ಷದ ಸಮಸ್ಯೆ ಬಗೆಹರಿಸಲು ಸಮಯವಿಲ್ಲವೇ? ಅಥವಾ ನಿಮ್ಮಲ್ಲಿ ಆ ಹುದ್ದೆಗೆ ಯೋಗ್ಯತೆ, ಅರ್ಹತೆ ಇರುವ ವ್ಯಕ್ತಿ ಯಾರೂ ಇಲ್ಲವೇ?ʼʼ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.