ವಾಟರ್ ಮ್ಯಾನ್ಗಳನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ: ಸಚಿವ ಬೈರತಿ ಸುರೇಶ್

ಸಚಿವ ಬೈರತಿ ಸುರೇಶ್
ಬೆಂಗಳೂರು: ರಾಜ್ಯದ ಎಲ್ಲ ಮಹಾನಗರ ವ್ಯಾಪ್ತಿಯ ಜಲಮಂಡಳಿಗಳಲ್ಲಿ 13 ಸಾವಿರ ಮಂದಿ ವಾಟರ್ ಮ್ಯಾನ್ ಗಳಿದ್ದು, ಇವರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರನ್ನು ಖಾಯಂಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.
ವಾಟರ್ ಮ್ಯಾನ್ ಗಳಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಟ ವೇತನ ನೀಡಲಾಗುತ್ತಿದೆ. ಅದೇ ರೀತಿ ಬಿಬಿಎಂಪಿ ಸೇರಿದಂತೆ ರಾಜ್ಯದಲ್ಲಿ 35 ಸಾವಿರ ಮಂದಿ ಪೌರಕಾರ್ಮಿಕರಿದ್ದಾರೆ. ಸರಕಾರಿ ನೌಕರರಂತೆಯೇ ಪರಿಗಣಿಸಲಾಗುತ್ತಿದೆ ಸರಕಾರದಿಂದ ವಿಶೇಷ ಅನುದಾನ ನೀಡಲಾಗಿದೆ ಎಂದು ಬೈರತಿ ಸುರೇಶ್ ಹೇಳಿದರು.
ಬಿಬಿಎಂಪಿ ಹೊರತುಪಡಿಸಿ ಜಲಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಆಧಾರದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ 1504 ವಾಟರ್ ಮ್ಯಾನ್ ಗಳಿದ್ದು ಇವರ ಕೆಲಸ ಖಾಯಂ ಕೋರಿ ಪೌರಾಡಳಿತ ನಿರ್ದೇಶನಾಲಯ ಪ್ರಸ್ತಾವನೆ ಸಲ್ಲಿಸಿತ್ತು. ಆರ್ಥಿಕ ಇಲಾಖೆಯು ಹೊರಗುತ್ತಿಗೆ ನೌಕರರನ್ನು ಯಥಾಸ್ಥಿತಿಯಂತೆ ಮುಂದುವರೆಸಬೇಕು. ಅಲ್ಲದೆ ಕನಿಷ್ಠ ವೇತನ ಕಾಯ್ದೆಯಂತೆ ವೇತನ ಪಾವತಿಸಬೇಕೆಂದು ಹೇಳಿದೆ. ಹೀಗಾಗಿ ಮಹಾನಗರ ಪಾಲಿಕೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಖಾಯಂ ನೌಕರರನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಬೈರತಿ ಸುರೇಶ್ ತಿಳಿಸಿದರು.