ಸಂಸದ ಸ್ಥಾನದಿಂದ ಪ್ರಜ್ವಲ್ ಅನರ್ಹ | ನಮ್ಮ ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದ ಜೆಡಿಎಸ್ ಶಾಸಕ ಎ.ಮಂಜು
ʼʼಪ್ರಜ್ವಲ್ ಮತ್ತು ನಾನು ಒಂದೇ ಪಕ್ಷದಲ್ಲಿದ್ದರೂ....ʼʼ
ಬೆಂಗಳೂರು, ಸೆ.1: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದ್ದು, ಈ ಬಗ್ಗೆ ಪ್ರಜ್ವಲ್ ವಿರುದ್ಧ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದ ಅರಕಲಗೂಡು ಜೆಡಿಎಸ್ ಶಾಸಕ ಎ. ಮಂಜು ಅವರು ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಹೈಕೋರ್ಟ್ ತೀರ್ಪನ್ನು ಸ್ವಾಗತಿಸುವೆ, ನಮ್ಮ ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆʼʼ ಎಂದು ಅವರು ತಿಳಿಸಿದರು.
ʼʼಸುಳ್ಳು ಮಾಹಿತಿ ನೀಡಿದ್ದರಿಂದ ಹೈಕೋರ್ಟ್ ಅನರ್ಹಗೊಳಿಸಿದೆ. ನಾವು ಸರಿಯಿದ್ದೇವೆ ಅನ್ನುವುದಾದರೆ ಅವರು ಕಾನೂನು ಹೋರಾಟ ಮಾಡಲಿ. ಆದರೆ, ಬದಲಾದ ಸನ್ನಿವೇಶದಲ್ಲಿ ನಾನು ಜೆಡಿಎಸ್ ಶಾಸಕನಾಗಿದ್ದೇನೆ. ಹಾಗಂತ ಒಂದೇ ಪಕ್ಷದಲ್ಲಿದ್ದೇವೆ ಎಂದು ಪ್ರಜ್ವಲ್ ವಿರುದ್ಧದ ಕೇಸ್ ವಾಪಸ್ ತೆಗೆದುಕೊಳ್ಳೋ ಪ್ರಶ್ನೆಯೇ ಇಲ್ಲʼʼ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ʼʼನಾನು ಜೆಡಿಎಸ್ ಸೇರುವಾಗ ಯಾವುದೇ ಷರತ್ತು ವಿಧಿಸಿರಲಿಲ್ಲ. ಪ್ರಜ್ವಲ್ ವಿರುದ್ಧ ಕೇಸ್ ಹಾಕಿದ್ದ ವಿಚಾರವಾಗಿ ಅಂದೇ ಹೇಳಿದ್ದೆ. ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಮಾತುಕತೆ ವೇಳೆ ಹೇಳಿದ್ದೆʼʼ ಎಂದು ಶಾಸಕ ಮಂಜು ಸ್ಪಷ್ಟಪಡಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು ಅಫಿಡವಿಟ್ ನಲ್ಲಿ ಘೋಷಿಸಿದ ಆಸ್ತಿ ವಿವರಗಳ ಕುರಿತು ಅಕ್ಷೇಪ ವ್ಯಕ್ತಪಡಿಸಿ ಎ.ಮಂಜು, ಮತ್ತು ವಕೀಲ ದೇವರಾಜೇಗೌಡ ಹೈಕೋರ್ಟ್ ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.