ಸಮಾನತೆ ಇಲ್ಲದ್ದು ಧರ್ಮವೇ ಅಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಸೆ.4: ಯಾವ ಧರ್ಮದಲ್ಲಿ ಸಮಾನತೆ ಇಲ್ಲವೋ ಅದು ಧರ್ಮವೇ ಅಲ್ಲ. ಯಾವ ಧರ್ಮದಲ್ಲಿ ಮನುಷ್ಯರ ನಡುವೆ ಬೇಧ ಭಾವ ಇದೆಯೋ ಅದು ಧರ್ಮವಲ್ಲ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ತಮಿಳುನಾಡಿನ ಸಚಿವ ಉದಯ್‍ನಿಧಿ ಸ್ಟಾಲಿನ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಇರುವುದರಿಂದ ಸಂವಿಧಾನವೇ ನಮ್ಮ ಧರ್ಮ ಎಂದರು.
ಉದಯ್‍ನಿಧಿ ಸ್ಟಾಲಿನ್ ಯಾವ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಆದರೆ, ನಾವೆಲ್ಲರೂ ಬುದ್ಧ, ಬಸವ, ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗವನ್ನು ಅನುಸರಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಉಚಿತ ಯೋಜನೆಗಳ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ಕಾಂಗ್ರೆಸ್ ಬಂದ ನಂತರ ಪ್ರಧಾನಿಗೆ ದೇಶದ ಆರ್ಥಿಕತೆ ಮೇಲೆ ಪ್ರೀತಿ ಬಂದಿದೆ. ಮನ್ ಕೀ ಬಾತ್‍ನಲ್ಲಿ ಒಮ್ಮೆಯೂ ಆರ್ಥಿಕತೆ ಬಗ್ಗೆ ಮಾತನಾಡದ ಮೋದಿಯವರು ಈಗಲಾದರೂ ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ ಒಂದು ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ರಾಜ್ಯದ ಆರ್ಥಿಕವಾಗಿ ಸುಭದ್ರವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಯಾವುದೇ ಸಮಸ್ಯೆಯಾಗಿಲ್ಲ. ನಾವು ರಾಜ್ಯದ ಆರ್ಥಿಕತೆಯ ಪಾಠವನ್ನು ಮೋದಿಯವರಿಂದ ಕಲಿಯುವ ಅವಶ್ಯಕತೆಯಿಲ್ಲ ಏಕೆಂದರೆ, ಕರ್ನಾಟಕದಲ್ಲಿ 15 ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಇದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.