ಮುಂದಿನ ವರ್ಷದಿಂದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೃಪಾಂಕ ಇರುವುದಿಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷ ಎಪ್ರಿಲ್‍ನಲ್ಲಿ ನಡೆಯುವ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೃಪಾಂಕವನ್ನು ನೀಡುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಹಿಂದಿನ ವರ್ಷ 1.70 ಲಕ್ಷ 10ನೆ ತರಗತಿ ಮಕ್ಕಳಿಗೆ ಶೇ.20 ರಷ್ಟು ಕೃಪಾಂಕ ನೀಡಿತ್ತು. ಮುಂದಿನ ಶೈಕ್ಷಣಿಕ ವರ್ಷನಿಂದ ಕೃಪಾಂಕವನ್ನು ಅಂಕ ನೀಡದಂತೆ ಈ ಹಿಂದೆಯೇ ಮುಖ್ಯಮಂತ್ರಿ ಅವರು ಸೂಚಿಸಿದ್ದಾರೆ. ಹಾಗಾಗಿ ಈ ಬಾರಿಯಿಂದ ಗ್ರೇಸ್ ಅಂಕ ನೀಡಲಾಗುವುದಿಲ್ಲ ಎಂದರು.
ಎಸೆಸೆಲ್ಸಿ ಪರೀಕ್ಷಾ ಅಕ್ರಮಗಳನ್ನು ತಡೆಯಲು ಹಿಂದಿನ ಸಾಲಿನಿಂದ ಎಲ್ಲ ಕೇಂದ್ರದಲ್ಲೂ ಕಡ್ಡಾಯ ಸಿಸಿ ಕ್ಯಾಮರಾ, ಪರೀಕ್ಷೆ ಕೊಠಡಿಯ ನೇರ ಪ್ರಸಾರ, ವೆಬ್‍ಕಾಸ್ಟಿಂಗ್ ಸೇರಿದಂತೆ ಕೆಲವು ಬಿಗಿ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದ ಸಾಮೂಹಿಕ ನಕಲು, ಕಾಪಿ ಹೊಡೆಯುವುದು, ಪರಸ್ಪರ ಮಾತನಾಡಿಕೊಂಡು ಪರೀಕ್ಷೆ ಬರೆಯುವುದು, ಕೊಠಡಿ ಮೇಲ್ವಿಚಾರಕರು ಮಕ್ಕಳನ್ನು ಸಡಿಲ ಬಿಡುವುದು ಇಂತಹವುಗಳಿಗೆ ಕಡಿವಾಣ ಬಿತ್ತು. ಇದರಿಂದ ಫಲಿತಾಂಶ ಪ್ರಮಾಣದಲ್ಲೂ ಕುಸಿತವಾಗಿರಬಹುದು ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೃಪಾಂಕಗಳ ಪ್ರಮಾಣ ಹೆಚ್ಚಿಸಿ ಒಂದಷ್ಟು ಮಂದಿಯನ್ನು ಉತ್ತೀರ್ಣ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ವರ್ಷ ಕೃಪಾಂಕ ಇರುವುದಿಲ್ಲ. ತಮ್ಮ ಶಾಲೆಗಳಿಗೆ ಉತ್ತಮ ಫಲಿತಾಂಶ ತರಲು ಶಿಕ್ಷಕರು ಹೆಚ್ಚು ಶ್ರಮ ಹಾಕುತ್ತಿದ್ದಾರೆ. ಹಾಗಾಗಿ ಉತ್ತಮ ರೀತಿಯಲ್ಲಿ ಮಕ್ಕಳು ಪರೀಕ್ಷೆಗೆ ಸಿದ್ದರಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.