ರಾಜ್ಯ ಸರ್ಕಾರದಿಂದಲೇ ಏರ್ಲೈನ್ಸ್ ಪ್ರಾರಂಭಿಸುವ ಬಗ್ಗೆ ಚಿಂತನೆ: ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು, ಸೆ.1: ರಾಜ್ಯ ಸರಕಾರದಿಂದಲೇ ಏರ್ಲೈನ್ಸ್ ಪ್ರಾರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರದಿಂದಲೇ ಏರ್ಲೈನ್ಸ್ ಪ್ರಾರಂಭಿಸುವ ಚಿಂತನೆಯಿದ್ದು, ಈ ಸಂಬಂಧ ಏರ್ ಇಂಡಿಯಾದ ಉನ್ನತಾಧಿಕಾರಿಯೊಬ್ಬರ ಜೊತೆ ಚರ್ಚಿಸಿದ್ದು, ಅವರು ಒಂದು ವಿಮಾನಕ್ಕೆ ಸರಾಸರಿ 200 ಕೋಟಿ ರೂ. ವೆಚ್ಚವಾಗಲಿದ್ದು, ರಾಜ್ಯದೊಳಗೆ ಓಡಾಡುವ ವಿಮಾನ ಸೇವೆಯನ್ನು ಆರಂಭಿಸುವ ಬಗ್ಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಪ್ರಾಥಮಿಕ ಚರ್ಚೆ ನಡೆದಿದೆ ಎಂದರು.
ಅದೇ ರೀತಿ, ಮುಂದಿನ ದಿನಗಳಲ್ಲಿ ವಿಜಯಪುರ, ಕಾರವಾರ, ಬೀದರ್ ಸೇರಿ ಮುಂದೆ ಎಲ್ಲ ಏರ್ಪೋರ್ಟ್‍ಗಳನ್ನು ನಾವೇ ನಿರ್ವಹಣೆ ಮಾಡುತ್ತೇವೆ. ಈ ಸಂಬಂಧ ರಾಜ್ಯ ವಿಮಾನ ಪ್ರಾಧಿಕಾರ ರಚಿಸಲಾಗುವುದು ಎಂದ ಅವರು, ಕೆಎಸ್‍ಐಐಡಿಸಿ ವತಿಯಿಂದ ಉತ್ತರ ಕನ್ನಡದ ತದಡಿಯಲ್ಲಿ 1,819 ಎಕರೆ ವಿಸ್ತಾರದಲ್ಲಿ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಇಕೋ ಟ್ಯೂರಿಸಂ ಪಾರ್ಕ್ ಸ್ಥಾಪಿಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ. ಅಲ್ಲದೇ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 407 ಎಕರೆ ವಿಸ್ತೀರ್ಣದಲ್ಲಿ ಹೊಸದಿಲ್ಲಿಯ ಏರೋ ಸಿಟಿ ಮಾದರಿಯಲ್ಲಿ ‘ಬಿಸಿನೆಸ್ ಪಾರ್ಕ್' ಸ್ಥಾಪಿಸಲು ಯೋಜಿಸಲಾಗುತ್ತದೆ ಎಂದರು.