''ಇದು ಬಡವರು ಚಹಾ ಕುಡಿಯುವ ಜಾಗ ಅಲ್ಲ": BJP ಶಾಸಕಾಂಗ ಸಭೆಯಿಂದ ಹೊರ ನಡೆದ ಯತ್ನಾಳ್..!
ಬೆಂಗಳೂರು, ನ.17: ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ತೋಡಿಕೊಂಡಿದ್ದಾರೆ.
ಇನ್ನು ಶಾಸಕಾಂಗ ಸಭೆಗೆ ಬಂದ ಯತ್ನಾಳ್, ಕೆಲವೇ ಕ್ಷಣಗಳಲ್ಲಿ '' ಇದು ಬಡವರು ಚಹಾ ಕುಡಿಯುವ ಜಾಗ ಅಲ್ಲ. ಚಹಾ ಕುಡಿಯಲು ಹೊರಗಡೆ ಹೋಗುತ್ತಿದ್ದೇನೆ'' ಎಂದು ಕಾರು ಹತ್ತಿ ಹೊರಟಿದ್ದಾರೆ. ಅವರ ಜೊತೆ ಕಾರಿನಲ್ಲಿ ರಮೇಶ್ ಜಾರಕಿಹೊಳಿ, ಬೆಲ್ಲದ್ ಸಹ ತೆರಳಿದ್ದಾರೆ.
ಇಂದು ಬೆಳಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಆರ್‌ಟಿ ನಗರದ ಮನೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ವಿಪಕ್ಷ ನಾಯಕನ ಸ್ಥಾನ ಉತ್ತರ ಕರ್ನಾಟಕಕ್ಕೆ ಕೊಡಬೇಕು ಎಂದು ಪಟ್ಟು
'ವಿಪಕ್ಷ ನಾಯಕ ಸ್ಥಾನ ಉತ್ತರ ಕರ್ನಾಟಕ್ಕೆ ಕೊಡಬೇಕು, ಅದರಲ್ಲಿ ರಾಜಿ ಇಲ್ಲ. ದಕ್ಷಿಣ ಕರ್ನಾಟಕದವರೇ ಆಗಬೇಕಾ? ಎಂದು ಪ್ರಶ್ನಿಸಿದ ಯತ್ನಾಳ್, ಉತ್ತರ ಕರ್ನಾಟಕಕ್ಕೆ ಅವಕಾಶ ಕೊಡದಿದ್ದರೆ ಜನ ತೀರ್ಮಾನ ಮಾಡುತ್ತಾರೆ, ಆಗ ನಾವೂ ತೀರ್ಮಾನ ಮಾಡುತ್ತೇವೆ'' ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪಟ್ಟು ಹಿಡಿದಿದ್ದಾರೆ.