ರಾಜ್ಯದ ಪ್ರತೀ ಶಾಸಕರ ಕ್ಷೇತ್ರಕ್ಕೆ ಮೂರು ಕೆಪಿಎಸ್ ಶಾಲೆ ಮಂಜೂರು: ಸಚಿವ ಮಧು ಬಂಗಾರಪ್ಪ
‘2024ರ ಮಾರ್ಚ್ ನಲ್ಲಿ ಕಾರ್ಯರೂಪಕ್ಕೆ’
ಚಿಕ್ಕಮಗಳೂರು, ಸೆ.28: ರಾಜ್ಯದ ಪ್ರತೀ ಶಾಸಕರ ಕ್ಷೇತ್ರಕ್ಕೆ ತಲಾ 3 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಲು ತೀರ್ಮಾನಿಸಿದ್ದು, ಮುಂದಿನ ವರ್ಷ 600 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುವುದು. ಅಲ್ಲದೆ, 2025ರೊಳಗೆ ರಾಜ್ಯದಲ್ಲಿ ಸುಮಾರು 2ಸಾವಿರ ಕೆಪಿಎಸ್ ಶಾಲೆಗಳ ಕಾರ್ಯಾರಂಭಕ್ಕೆ ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ತರೀಕೆರೆ ತಾಲೂಕಿನ ಬಾವಿಕೆರೆಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಗುಂಪು ಆಟಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಗೆ ಅತೀ ಹೆಚ್ಚು ಅನುದಾನ ಅಗತ್ಯವಿದೆ. ಈ ಬಾರಿ ಅನುದಾನದ ಕೊರತೆ ಇದ್ದರೂ ಸಿಎಸ್ಆರ್ ಅನುದಾನದಲ್ಲಿ ಈ ಯೋಜನೆ ಜಾರಿಗೆ ತರಲು ಚಿಂತಿಸಲಾಗಿದೆ ಎಂದ ಸಚಿವರು, ಕೆಪಿಎಸ್ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಹೇಳಿಕೊಡಲಾಗುತ್ತಿದೆ. ಈ ಕಾರಣಕ್ಕೆ ಈ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚುತ್ತಿದ್ದು, ಬೇಡಿಕೆಯೂ ಹೆಚ್ಚುತ್ತಿದೆ ಎಂದು ಹೇಳಿದರು.
ಈ ಹಿಂದೆ ವರ್ಷದಲ್ಲಿ ಮೂರು ಬಾರಿ ಬೋರ್ಡ್ ಪರೀಕ್ಷೆ ನಡೆಸಲಾಗುತ್ತಿದ್ದು, ಒಂದೇ ವರ್ಷದಲ್ಲಿ ಮೂರು ಬಾರಿ ಬೋರ್ಡ್ ಪರೀಕ್ಷೆ ನಡೆಸುವುದರಿಂದಾಗಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಒಂದು ವರ್ಷ ನಷ್ಟ ಆಗುವುದು ತಪ್ಪಿದೆ. ರಾಜ್ಯದ 42 ಸಾವಿರ ವಿದ್ಯಾರ್ಥಿಗಳಿಗೆ ಈ ವರ್ಷದಲ್ಲಿ ಮತ್ತೆ ಪರೀಕ್ಷೆ ಎದುರಿಸಿ ಪಾಸ್ ಆಗಲು ಸಾಧ್ಯವಾಗಿದೆ ಎಂದು ನುಡಿದರು.
ಒಂದೇ ವರ್ಷದಲ್ಲಿ ಮೂರು ಬಾರಿ ಬೋರ್ಡ್ ಪರೀಕ್ಷೆ ನಡೆಸಿರುವುದು ದೇಶದ ಇತಿಹಾಸದಲ್ಲೇ ಪ್ರಥಮವಾಗಿದೆ. ಈ ಪರೀಕ್ಷೆಯಲ್ಲಿ ರಾಜ್ಯದ 1 ಲಕ್ಷದ 20 ಸಾವಿರ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆದಿದ್ದು, ಅದರಲ್ಲಿ 42 ಸಾವಿರ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಆ ಎಲ್ಲಾ ವಿದ್ಯಾರ್ಥಿಗಳು ಇದೇ ವರ್ಷ ಕಾಲೇಜಿಗೆ ದಾಖಲಾಗುತ್ತಾರೆ ಎಂದು ಮಾಹಿತಿ ನೀಡಿದ ಮಧು ಬಂಗಾರಪ್ಪ, ಮುಂದಿನ ವರ್ಷ ಎಸೆಸೆಲ್ಸಿಗೂ ವರ್ಷದಲ್ಲಿ ಮೂರು ಬಾರಿ ಬೋರ್ಡ್ ಎಕ್ಸಾಮ್ ನಡೆಸಲಾಗುವುದು ಎಂಉ ಹೇಳಿದರು.
ಮುಂದಿನ ವರ್ಷದಿಂದ ಮಕ್ಕಳ ಶಾಲಾ ಬ್ಯಾಗಿನ ಹೊರೆಯನ್ನು ಅರ್ಧದಷ್ಟು ಕಡಿಮೆ ಮಾಡಲಾಗುವುದು. ಆ ದಿನಕ್ಕೆ ಅಗತ್ಯವಿರುವ ಪುಸ್ತಕಗಳನ್ನು ಮಾತ್ರ ತೆಗೆದುಕೊಂಡು ಹೋಗಲು ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು
ಶಿಕ್ಷಣ ಇಲಾಖೆ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಎಲ್ಲವನ್ನೂ ಬಗೆಹರಿಸಲು ಸಾಧ್ಯವಾಗದಿದ್ದರೂ ಕೆಲವನ್ನಾದರೂ ಖಂಡಿತಾ ಪರಿಹರಿಸಲಾಗುವುದು. ಈ ಕಾರ್ಯಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕೈಜೋಡಿಸಬೇಕೆಂದು ಕೋರಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಚಂದ್ರಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ತರೀಕೆರೆ ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ಡಾ.ಕಾಂತರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗನಾಥಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಲಕ್ಷ್ಮೀ, ರೂಪಾ, ಯುಮುನಾ, ಭರತ್ಕುಮಾರ್, ಗೀತಾ ಶಂಕರ್, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಪ್ರತೀ ಮೂರು ಗ್ರಾಮಗಳಿಗೆ ತಲಾ ಒಂದರಂತೆ ರಾಜ್ಯದ ಸುಮಾರು 150 ಶಾಸಕರಿಗೆ ತಲಾ ಮೂರು ಕೆಪಿಎಸ್ ಶಾಲೆಗಳನ್ನು ನೀಡಲಾಗುತ್ತಿದೆ. 2024ರ ಮಾರ್ಚ್ ತಿಂಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ. ಕೆಪಿಎಸ್ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿಯಿಂದ 12ನೇ ತರಗತಿವರೆಗೆ ಶಾಲಾ-ಕಾಲೇಜನ್ನು ಒಂದೇ ಆವರಣದಲ್ಲಿ ಆರಂಭಿಸಲಾಗುವುದು. ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮದಲ್ಲೂ ಶಾಲೆ ಇರಲಿದ್ದು, ಪೋಷಕರು ತಮ್ಮ ಮಕ್ಕಳನ್ನು ಯಾವ ಮಾಧ್ಯಮದ ಶಾಲೆಗಾದರೂ ಸೇರಿಸಬಹುದು.
ಮಧು ಬಂಗಾರಪ್ಪ, ಶಿಕ್ಷಣ ಸಚಿವ