ʼಹುಲಿ ಉಗುರುʼ ಪ್ರಕರಣ: ನಟ ಜಗ್ಗೇಶ್ ವಿರುದ್ಧದ ಅರಣ್ಯಾಧಿಕಾರಿಗಳ ನೋಟಿಸ್‍ಗೆ ಹೈಕೋರ್ಟ್ ತಡೆ
ಬೆಂಗಳೂರು, ಅ.30: ಹುಲಿ ಉಗುರಿನ ಲಾಕೆಟ್ ಧರಿಸಿದ ಆರೋಪ ಪ್ರಕರಣದಲ್ಲಿ ನೀಡಿರುವ ನೋಟಿಸ್ ಪ್ರಶ್ನಿಸಿ ರಾಜ್ಯಸಭಾ ಸದಸ್ಯರೂ ಆದ ನಟ ಜಗ್ಗೇಶ್ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಅರಣ್ಯ ಇಲಾಖೆಯ ನೋಟಿಸ್ ಹಾಗೂ ಶೋಧನಾ ವಾರೆಂಟ್‍ಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಸಾಮಾಜಿಕ ಜಾಲತಾಣಗಳ ದೃಶ್ಯಗಳನ್ನು ಆಧರಿಸಿ ನೋಟಿಸ್ ಜಾರಿ ಮತ್ತು ಮನೆ ಶೋಧನೆ ನಡೆಸಲು ಮುಂದಾಗಿದ್ದ ಅರಣ್ಯ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಜಗ್ಗೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.
ಅಲ್ಲದೇ, ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದ ಬಳಿಕ ಅವರ ಉತ್ತರಕ್ಕಾಗಿ ನಿರೀಕ್ಷೆ ಮಾಡಬೇಕು. ಇಲ್ಲವೇ ಅವರು ಹೇಳಿಕೆ ನೀಡುವವರೆಗೂ ಸುಮ್ಮನೆ ಇರಬೇಕು. ನೋಟಿಸ್ ನೀಡಿದ ಒಂದೇ ತಾಸಿನಲ್ಲಿ ಶೋಧನೆ ನಡೆಸಿರುವ ಉದ್ದೇಶವೇನು? ಪ್ರಚಾರಕ್ಕಾಗಿ ಈ ರೀತಿ ನಡೆದುಕೊಳ್ಳಲಾಗಿದೆಯೇ? ಪ್ರಚಾರಕ್ಕಾಗಿ ಬೇರೆ ಯಾವುದಾದರೂ ಕೆಲಸ ಮಾಡಿ, ಅದರ ಬದಲಿಗೆ ಈ ರೀತಿಯಲ್ಲಿ ದಾಳಿ ನಡೆಸಿ ಪ್ರಚಾರ ಪಡೆದುಕೊಳ್ಳುವುದು ಎಷ್ಟು ಸರಿ ಎಂದು ಪೀಠ ಪ್ರಶ್ನೆ ಮಾಡಿತು.
ಪ್ರಕರಣವೇನು:? ಕಳೆದ ಕೆಲ ವರ್ಷಗಳ ಹಿಂದೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಸಂದರ್ಭ, ಜಗ್ಗೇಶ್ ಅವರು ತನ್ನಲ್ಲಿದ್ದ ಹುಲಿ ಉಗುರಿನ ಲಾಕೆಟ್ ಅನ್ನು ತೋರಿಸಿ ಇದು ನಿಜವಾದ ಹುಲಿ ಉಗುರು. ನನ್ನ ಮಗ ಹುಲಿಯಂತಿರಬೇಕು ಎಂದು ನಮ್ಮ ತಾಯಿ ನನಗೆ ಹಾಕಿದ್ದಾರೆ ಎಂದು ಹೇಳಿದ್ದರು.
ಈ ನಡುವೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಲಿ ಉಗುರು ಧರಿಸಿದ್ದ ಹಿನ್ನೆಲೆ ಅವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್ ಸಂದರ್ಶನದ ಹೇಳಿಕೆಯುಳ್ಳ ದೃಶ್ಯಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಈ ಹಿನ್ನೆಲೆಯಲ್ಲಿ ಜಗ್ಗೇಶ್‍ಗೆ ನೋಟಿಸ್ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮನೆಯಲ್ಲಿ ಶೋಧನೆ ನಡೆಸಿದ್ದರು. ಇದನ್ನು ಪ್ರಶ್ನಿಸಿ ಜಗ್ಗೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.