ಜನರ ಆಕ್ರೋಶಕ್ಕೆ ವಿರಾಮ ಹಾಕಲು ರಾಜ್ಯ ಸರಕಾರದಿಂದ ಹುಲಿ ಉಗುರಿನ ನಾಟಕ: ಸಿ.ಟಿ.ರವಿ
ಚಿಕ್ಕಮಗಳೂರು, ಅ.27: ರಾಜ್ಯ ಸರಕಾರ ಜನರನ್ನು ದಾರಿತಪ್ಪಿಸಲು ಹುಲಿ ಉಗುರಿನ ಸದಾರಮೆ ನಾಟವಾಡುತ್ತಿದೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಫೇಸ್‍ಬುಕ್ ವಾಲ್‍ನಲ್ಲಿ ಬರೆದುಕೊಳ್ಳುವ ಮೂಲಕ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಲಿ ಉಗುರು ಪ್ರಕರಣ ಮುಂದಿಟ್ಟುಕೊಂಡು ರಾಜ್ಯ ಸರಕಾರ ಐಟಿ ದಾಳಿಯಲ್ಲಿ ಪತ್ತೆಯಾದ ಕೋಟ್ಯಂತರ ರೂ.ಹಣದ ಚರ್ಚೆಯ ದಾರಿ ತಪ್ಪಿಸುವ ನಾಟಕವಾಡುತ್ತಿದೆ. ಜನರ ಆಕ್ರೋಶಕ್ಕೆ ವಿರಾಮ ಹಾಕಲು ಕಮಿಷನ್ ಕಲೆಕ್ಟರ್ (ಸಿ.ಎಂ.) ಡೆಪ್ಯೂಟಿ ಕಮಿಷನ್ ಕಲೆಕ್ಟರ್ (ಡಿಸಿಎಂ) ಅವರು ಹುಲಿ ಉಗುರು ನಾಟಕವಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಜನರು ನೂರಾರು ವರ್ಷಗಳಿಂದ ಹುಲಿ ಉಗುರನ್ನು ಆಭರಣವಾಗಿ ಧರಿಸಿದ್ದಾರೆ. ಇದು ಇಲಾಖೆಗೇನು ಕಾಣದಿದ್ದಲ್ಲ. ಸರ್ಕಾರದ ವೈಫಲ್ಯ, ಬೋಗಸ್ ಭರವಸೆಗಳಿಗೆ ಜನರು ಆಕ್ರೋಶಗೊಂಡಿದ್ದು, ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದೆ ಕತ್ತಲೆ ಭಾಗ್ಯ ನೀಡಿದೆ. ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲವಾಗಿದೆ. ಶಾಸಕರು ಬಂಡಾಯ ಎದಿದ್ದಾರೆ. ಪಂಚರಾಜ್ಯಗಳ ಚುನಾವಣೆಗೆ ಸಂಗ್ರಹಿಸಿದ್ದ ಹಣ ಐಟಿ ಪಾ ಲಾಗಿದೆ. ಸರ್ಕಾರ ಜನರ ಎದುರು ತಲೆಎತ್ತಿ ನಡೆಯದಂತಾಗಿದೆ ಎಂದಿದ್ದಾರೆ.
ನಿಮ್ಮ ಮಂತ್ರಿಮಂಡಲದೊಳಗೆ ಇಣುಕಿ ನೋಡಿ ಕಾಡು ಪ್ರಾಣಿಗಳನ್ನು ಬಂಧನದಲ್ಲಿರಿಸಿ ಹತ್ಯೆ ಮಾಡಿದವರು ಸಿಗುತ್ತಾರೆ. ಜನಸಾಮಾನ್ಯರಿಗೆ ಎಫ್‍ಎಸ್‍ಎಲ್ ವರದಿ ಬರುವ ಮುಂಚೆಯೇ ಬಂಧನ, ಸೆಲೆಬ್ರಿಟಿಗಳಿಗೆ ನೋಟಿಸ್ ಇದೆಲ್ಲವೂ ನಾಟಕದ ಭಾಗವಲ್ಲವೇ ಎಂದಿರುವ ಅವರು ಇದು ಸರಕಾರದ ಪ್ರಾಮಾಣಿಕತೆಯ ಬಗ್ಗೆ ಸಂಶಯ ಮೂಡಿಸುತ್ತದೆ ಎಂದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.