ಬಿಜೆಪಿ ಅವಧಿಯಲ್ಲೇ ತಿರುಪತಿಗೆ ತುಪ್ಪ ಸರಬರಾಜು ಸ್ಥಗಿತ; ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸಲು ನಳಿನ್ ಕುಮಾರ್ ಯತ್ನ !
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಅಸಡ್ಡೆಯಿಂದ ತಿರುಪತಿ ಲಡ್ಡು ತಯಾರಿಗೆ ನಂದಿನಿ ತುಪ್ಪದ ಸರಬರಾಜು ನಿಂತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
“ದೇವಸ್ಥಾನ ಹಾಗೂ ಹಿಂದೂಗಳ ಶ್ರದ್ಧೆ-ಭಕ್ತಿಯ ವಿಚಾರದಲ್ಲಿ ಅಸಡ್ಡೆ ತೋರುವ ಕಾಂಗ್ರೆಸ್ ನೀತಿಯಿಂದಾಗಿ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತಗೊಂಡಿದೆ. ತಿರುಪತಿಯೊಂದಿಗಿನ 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಡಲಾಗಿದ್ದು, ಹಿಂದೂಗಳೆಡಗಿನ ಸಿದ್ದರಾಮಯ್ಯ ಅವರ ತಾತ್ಸಾರ ನೀತಿ ರುಜುವಾತಾಗಿದೆ.” ಎಂದು ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
ಆದರೆ, ಕಳೆದ ಒಂದುವರೆ ವರ್ಷಗಳಿಂದಲೂ ನಂದಿನಿ ತುಪ್ಪವನ್ನು ಕೆಎಂಎಫ್ ತಿರುಪತಿಗೆ ಸರಬರಾಜು ಮಾಡುತ್ತಿಲ್ಲ ಕೆಎಂಎಫ್ ಎಂಡಿ ಜಗದೀಶ್ ಹೇಳಿದ್ದಾರೆ. ಆ ಮೂಲಕ ಬಿಜೆಪಿ ಅವಧಿಯಲ್ಲಿಯೇ ನಂದಿನಿ ತುಪ್ಪವನ್ನು ತಿರುಪತಿಗೆ ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದು, ಇದರಲ್ಲಿ ಆ ಸರ್ಕಾರ, ಈ ಸರ್ಕಾರ ಎಂದೇನಿಲ್ಲ, ನಮ್ಮ ದರಕ್ಕೆ ಖರೀದಿ ಮಾಡಿದ್ರೆ, ತುಪ್ಪ ನೀಡಲು ನಾವು ತಯಾರಾಗಿದ್ದೇವೆ ಎಂದು ತಿಳಿಸಿದ್ದಾರೆ. ಅನಿವಾರ್ಯತೆ ಯಾವಾಗೆಲ್ಲಾ ಬರುತ್ತದೆಯೋ, ಆಗೆಲ್ಲಾ ನಾವು ಪೂರೈಸುತ್ತೇವೆ, ಇದರಲ್ಲಿ ಆ ಸರ್ಕಾರ, ಈ ಸರ್ಕಾರ ಅನ್ನೋದು ಏನಿಲ್ಲ. ಟೆಂಡರ್ ಕರೆದು ನಮ್ಮ ಬಿಡ್ಡಿಂಗ್ ಕಡಿಮೆಯಾದಾಗ ನಾವು ತುಪ್ಪವನ್ನು ಪೂರೈಸಿದ್ದೇವೆ.
2021- 2022ರಲ್ಲಿ 345 ಮೆಟ್ರಿಕ್ ಟನ್ ನಂದಿನಿ ತುಪ್ಪವನ್ನು ಸರಬರಾಜು ಮಾಡಿದ್ದೇವೆ, ಟಿಟಿಡಿಯವರು ನಾವು ನಿಗದಿಪಡಿಸಿದ ದರದಲ್ಲೇ ಖರೀದಿಸಿದ್ದರು ಎಂದಿದ್ದಾರೆ.
ನಾವು ಕೊಡುವ ಗುಣಮಟ್ಟ, ನಾವು ಮಾಡುವ ಕಾರ್ಯವಿಧಾನ, ಲಾಭ ನಷ್ಟಗಳು ನಮಗೆ ಹಾಗೂ ಇತರರಿಗೆ ವ್ಯತ್ಯಾಸ ಇರುತ್ತದೆ, ನಮ್ಮನ್ನು ನಷ್ಟಪಡಿಸಿಕೊಂಡು ಟೆಂಡರ್ ಅಲ್ಲಿ ಭಾಗಿಯಾಗಲು ಸಾಧ್ಯವಿಲ್ಲ, ಈಗಾಗಲೇ 1.5 ವರ್ಷ ದಿಂದ ನಾವು ತುಪ್ಪ ಸರಬರಾಜು ಮಾಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೆಎಂಎಫ್ ಅಧಿಕೃತರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನಳಿನ್ ಕುಮಾರ್ ಕಟೀಲ್ ಆರೋಪಗಳಿಗೆ ಜನರಿಂದ ಟೀಕೆ ವ್ಯಕ್ತವಾಗಿದೆ.
“ಸುಳ್ಸುದ್ದಿ ವೀರರು ಮಾನ್ಯ ಪಂಪವೇಲ್ ಪಿತಾಮಹರು. ತುಪ್ಪ ಕೊಡೋದು ನಿಲ್ಲಿಸಿದ್ದು ನಿಮ್ಮದೇ ಪಕ್ಷದ ಸರ್ಕಾರದ ಹೊತ್ತಲ್ಲಿ” ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.