ಬೆಂಗಳೂರು-ಮೈಸೂರು ಹೆದ್ದಾರಿಯ 2ನೇ ಹಂತದ ಟೋಲ್ ಸಂಗ್ರಹ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ; ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲ

ಮಂಡ್ಯ, ಜು.1: ಬೆಂಗಳೂರು-ಮೈಸೂರು ಹೆದ್ದಾರಿಯ ಶ್ರೀರಂಗಪಟ್ಟಣದ ತಾಲೂಕಿನ ಗಣಂಗೂರು ಬಳಿ ಇಂದಿನಿಂದ ಟೋಲ್ ಸಂಗ್ರಹ ಮಾಡುವುದನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಕರುನಾಡ ಸೇವಕರು ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.
ಹೆದ್ದಾರಿ ಉದ್ದಕ್ಕೂ ಸರ್ವೀಸ್ ರಸ್ತೆಗಳು ಸಂಪೂರ್ಣಗೊಂಡಿಲ್ಲ. ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ಸಾಲುಸಾಲು ಅಪಘಾತಗಳು ನಡೆಯುತ್ತಿವೆ. ಈ ಎಲ್ಲ ಕಾರಣದಿಂದ ಟೋಲ್ ಸಂಗ್ರಹವನ್ನು ಹಿಂಪಡೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಹೆದ್ದಾರಿಯ ಎರಡು ಬದಿಯಲ್ಲಿ ಮೂರು ಪಥದ ಸರ್ವೀಸ್ ರಸ್ತೆಯನ್ನು ಟೋಲ್ ರಸ್ತೆಯ ಗುಣಮಟ್ಟದಲ್ಲಿ ನಿರ್ಮಿಸಿ ನಿರ್ವಹಿಸಬೇಕು. ರಸ್ತೆ ನಿರ್ವಹಣೆಯಲ್ಲಿ ಶೇ.100 ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕು ಹಾಗೂ ತಕ್ಷಣದಿಂದ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕು ಎಂದು ಅವರು ತಾಕೀತು ಮಾಡಿದರು.
ಸಂಘಟನೆ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಮಂಡ್ಯ ನಗರಾಧ್ಯಕ್ಷ ಚಂದ್ರು, ಕೆಂಪರಾಜು, ಮಂಜುನಾಥ್, ತಿಮ್ಮೇಗೌಡ, ಮನು ಬೂದನೂರು, ಶಿವಣ್ಣ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
“ಕೇವಲ ಟೋಲ್ ಉದ್ದೇಶಕ್ಕಾಗಿ ಈ ರಸ್ತೆ ನಿರ್ಮಿಸಿ ಉಳ್ಳವರಿಗೆ ಮಾತ್ರ ರಸ್ತೆ ಎಂಬ ನೀತಿಯನ್ನು ಪ್ರತಿಪಾದಿಸಿ ಜನಸಾಮಾನ್ಯರನ್ನು ಹೆದ್ದಾರಿ ಬಳಕೆಯಿಂದ ಹೊರಗುಳಿಸಲಾಗಿದೆ. ಹೆದ್ದಾರಿಯುದ್ದಕ್ಕೂ ಇದ್ದ ವಹಿವಾಟು ಸಂಪೂರ್ಣ ನೆಲಕಚ್ಚಿ ಭೂಮಿಯ ಮೌಲ್ಯ ಇಳಿಮುಖವಾಗಿದೆ. ಕೇಂದ್ರ ಒಕ್ಕೂಟ ಸರಕಾರ ರಾಜ್ಯದಿಂದ ನೇರ ತೆರಿಗೆ ಹಾಗೂ ಜಿಎಸ್‍ಟಿ ಮೂಲಕ ವಾರ್ಷಿಕ ನಾಲ್ಕು ಲಕ್ಷ ಕೋಟಿ ಹಣವನ್ನು ರಾಜ್ಯದಿಂದ ಹೊತ್ತೊಯ್ಯುತ್ತಿದೆ.”
-ಎಂ.ಬಿ.ನಾಗಣ್ಣಗೌಡ.
''ಮೈಸೂರು ಬೆಂಗಳೂರು ಹೆದ್ದಾರಿ ಎರಡನೇ ಟೋಲ್ ಸಂಗ್ರಹ ವಿಚಾರ, ಕೇಂದ್ರ ಸರ್ಕಾರದ ಉದ್ಧಟತನ. ಜನರಿಗೆ ಟೋಲ್ ಕಟ್ಟದಂತೆ ಕರೆ ನೀಡಲಾಗಿದೆ. ಟೋಲ್ ಸಂಗ್ರಹ ವಿರೋಧಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನೇರವಾಗಿ ಪ್ರತಿಭಟನೆಗೆ ಹೋಗಲ್ಲ ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುವುದು. ಕೇಂದ್ರ ಈ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಟೋಲ್ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರಲಾಗಿದೆ. ನಮ್ಮ ಶಾಸಕರು ಮುಖ್ಯ ಕಾರ್ಯದರ್ಶಿ ಭೇಟಿ ಮಾಡಿ ಮಾತನಾಡಿದ್ದಾರೆ''
- ಕೃಷಿ ಸಚಿವ ಎನ್.ಚಲುವರಾಯಸ್ವಾಮಿ