ಟ್ರಾಫಿಕ್ ಪಿಎಸ್ಐ ಪುತ್ರ ವ್ಹೀಲಿಂಗ್ ಮಾಡುತ್ತಿದ್ದ ಬೈಕ್ ಢಿಕ್ಕಿ ; ವೃದ್ಧ ಸ್ಥಳದಲ್ಲೇ ಮೃತ್ಯು
ಅಪ್ರಾಪ್ತ ಸವಾರನ ಬಂಧನ; ಪಿಎಸ್ಐ ವರ್ಗಾವಣೆ
ರೈತರು ಹಾಗೂ ಗ್ರಾಮಸ್ಥರಿಂದ ಪ್ರತಿಭಟನೆ
ಮೈಸೂರು: ನಂಜನಗೂಡು ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಯೋರ್ವನ ಪುತ್ರ ಬೈಕ್ ವ್ಹೀಲಿಂಗ್ ಮಾಡುವ ವೇಳೆ ವ್ಯಕ್ತಿ ಮೇಲೆ ಹರಿಸಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಕೆ.ಆರ್.ಆಸ್ಪತ್ರೆಯ ಶವಾಗಾರದ ಮುಂದೆ ರೈತರು ಪ್ರತಿಭಟನೆ ನಡೆಸಿದರು.
ನಂಜನಗೂಡು ತಾಲ್ಲೂಕು ಅಡಕನಹಳ್ಳಿ ಕೈಗಾರಿಕಾ ಪ್ರದೇಶದ ಹಿಮ್ಮಾವು ಗ್ರಾಮದ ಬಳಿ ದನ ಮೇಯಿಸುತ್ತಿದ್ದ ಗುರುಸಿದ್ಧಪ್ಪ (68) ಎಂಬ ವ್ಯಕ್ತಿಗೆ ಶನಿವಾರ ಸಂಜೆ ಅಪ್ರಾಪ್ತ ಸವಾರ ತನ್ನ ಬೈಕ್ ವ್ಹೀಲಿಂಗ್ ಮಾಡಿಕೊಂಡು ಬಂದು ಗುದ್ದಿದ್ದಾನೆ. ಮತ್ತೊಬ್ಬ ಗೋವಿಂದರಾಜು (25) ಎಂಬುವವರಿಗೂ ಗುದ್ದಿದ್ದಾನೆ. ಗುರುಸಿದ್ಧಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಬಸವರಾಜು ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಂಜನಗೂಡು ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಪುತ್ರ ಎಂದು ಗೊತ್ತಾಗುತ್ತಿದ್ದಂತೆ, ತಕ್ಷಣ ಗ್ರಾಮಸ್ಥರು ಹಿಡಿದು ಸಂಚಾರ ಪೊಲೀಸ್ ಠಾಣೆಗೆ ದೂರು ನೀಡದೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ ಎಂದು ಹೇಳಲಾಗಿದೆ.
ರವಿವಾರ ಕೆ.ಆರ್.ಆಸ್ಪತ್ರೆಯ ಶವಾಗಾರದ ಬಳಿ ಪ್ರತಿಭಟನೆ ನಡೆಸಿದ ರೈತರು ಹಾಗೂ ಹಿಮ್ಮಾವು ಗ್ರಾಮಸ್ಥರು, ʼʼಅಪ್ರಾಪ್ತ ಯುವಕನಿಗೆ ಬೈಕ್ ನೀಡಿ ವ್ಹೀಲಿಂಗ್ ಮಾಡಲು ಕಾರಣರಾದ ಅವರ ತಾಯಿ ಪೊಲೀಸ್ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು. ಬೇರೆಯವರಿಗೆ ಕಾನೂನು ಹೇಳುವ ಮತ್ತು ದಂಡ ವಿಧಿಸುವ ಪೊಲೀಸ್ ಅಧಿಕಾರಿ ತನ್ನ ಮಗನಿಗೆ ಕಾನೂನು ಪಾಠ ಹೇಳಿಕೊಡದಿದ್ದ ಮೇಲೆ ಅವರನ್ನು ಅಮಾನತುಗೊಳಿಸಬೇಕುʼʼ ಎಂದು ಆಗ್ರಹಿಸಿದರು.
ಪಿಎಸ್ಐ ಪುತ್ರ ಈ ಹಿಂದೆ ಕೂಡ ರಿಂಗ್ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮೈಸೂರು ನಗರದ ಸಿದ್ಧಾರ್ಥ ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದರು.
ʼʼಈ ಪ್ರಕರಣದಿಂದ ಅಮಾಯಕ ವೃದ್ಧ ಸಾವಿಗೀಡಾಗಿದ್ದು, ಇದೇ ರೀತಿ ಮುಂದುವರಿದರೆ ಇನ್ನಷ್ಟು ಅಮಾಯಕರು ಬಲಿಯಾಗಲಿದ್ದಾರೆ. ಈ ಪ್ರಕರಣದಿಂದ ಬೇರೆಯವರಿಗೆ ಪಾಠವಾಗಬೇಕು. ಹಾಗಾಗಿ ಪಿಎಸ್ಐ ಅವರನ್ನು ಅಮಾನತುಗೊಳಿಸಬೇಕುʼʼ ಎಂದು ರೈತ ಮುಖಂಡ ಪಿ.ಮರಂಕಯ್ಯ ಒತ್ತಾಯಿಸಿದ್ದಾರೆ.
ಪಿಎಸ್ಐ ಅಮಾನತು
ಈ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಹಿರಿಯ ಪೊಲೀಸ್ ಅಧಿಕಾರಿಗಳು ಪಿಎಸ್ಐ ಅವರನ್ನು ನಂಜನಗೂಡು ಸಂಚಾರ ಪೊಲೀಸ್ ಠಾಣೆಯಿಂದ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.