ಆರೋಗ್ಯ ಇಲಾಖೆಯಲ್ಲಿ ‘ಕೌನ್ಸೆಲಿಂಗ್’ ಮೂಲಕ ವರ್ಗಾವಣೆ: ದಿನೇಶ್ ಗುಂಡೂರಾವ್
ಬೆಂಗಳೂರು: ಆರೋಗ್ಯ ಇಲಾಖೆ ಯಯಲ್ಲಿ ಈ ಬಾರಿ ಕೌನ್ಸೆಲಿಂಗ್ ಮೂಲಕವೇ ವರ್ಗಾವಣೆ ನಡೆಯಲಿದೆ. 2016ರ ಬಳಿಕ ಆರೋಗ್ಯ ಇಲಾಖೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಯಲಿದ್ದು, 8 ವರ್ಷಗಳಿಂದ ಕೌನ್ಸೆಲಿಂಗ್ ಎದುರು ನೋಡುತ್ತಿದ್ದ ಅರ್ಹ ವೈದ್ಯರು, ಸಿಬ್ಬಂದಿಗೆ ನ್ಯಾಯ ಒದಗಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶನಿವಾರ ಪ್ರಕಟನೆ ಹೊರಡಿಸಿರುವ ಅವರು, ಹಿಂದಿನ ವರ್ಷ ಸರಕಾರ ರಚನೆಯಾದ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ವರ್ಗಾವಣೆಗೆ ಬೇಡಿಕೆಯಿಟ್ಟಿದ್ದರು. ಸಾಮಾನ್ಯ ವರ್ಗವಾಣೆ ನಡೆಸಿದರೂ, ಎಲ್ಲರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಸಾಕಷ್ಟು ವರ್ಗಾವಣೆ ಒತ್ತಡ ಪರಿಸ್ಥಿತಿಗಳನ್ನು ಎದುರಿಸಬೇಕಾಗಿ ಬಂದಿತ್ತು ಎಂದಿದ್ದಾರೆ.
ಅಲ್ಲದೇ 2016ರಿಂದ ಆರೋಗ್ಯ ಇಲಾಖೆಯಲ್ಲಿ ಸಮರ್ಪಕವಾದ ವರ್ಗಾವಣೆ ನಡೆದಿರಲಿಲ್ಲ. ಅಲ್ಲದೇ ಸಾಮಾನ್ಯ ವರ್ಗಾವಣೆಯಲ್ಲಿ ಅರ್ಹರಿಗೆ ನ್ಯಾಯ ದೊರೆಯುವುದಿಲ್ಲ. ಹೀಗಾಗಿ ಈ ಬಾರಿ ಪೂರ್ಣ ಪ್ರಮಾಣದ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ನಡೆಸುವಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಅವರು ವಿವರಿಸಿದ್ದಾರೆ.
ಗ್ರೂಪ್ ‘ಎ’ಯಿಂದ ಹಿಡಿದು ಗ್ರೂಪ್ ‘ಡಿ’ಯಲ್ಲಿ ಬರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ಕೌನ್ಸಿಂಗ್ ಮೂಲಕವೇ ವರ್ಗಾವಣೆ ನಡೆಸಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಜು.31 ರೊಳಗೆ ಕೌನ್ಸಿಲಿಂಗ್ ಪೂರ್ಣಗೊಳ್ಳಲಿದೆ. ಇಲಾಖೆಯಲ್ಲಿ ಗುರುತಿಸಿರುವ ತಜ್ಞ ಹುದ್ದೆಗಳಲ್ಲಿ ವೈದ್ಯರುಗಳು ತಜ್ಞತೆಗೆ ಅನುಗುಣವಾಗಿ ಕಾರ್ಯನಿರ್ವಹಿಸದೇ ಇತರೆ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರ ಮಾಹಿತಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಮೂರು ವರ್ಷ ಸೇವಾವಧಿ ಪೂರೈಸಿರುವ ವೈದ್ಯರು, ನಾಲ್ಕು ವರ್ಷ ಪೂರೈಸಿರುವ ಗ್ರೂಪ್ ಬಿ ನೌಕರರು, 5 ವರ್ಷ ಪೂರೈಸಿದ ಗ್ರೂಪ್ ಸಿ ನೌಕರರು ಹಾಗೂ 7 ವರ್ಷ ಸೇವಾವಧಿ ಪೂರೈಸಿರುವ ಗ್ರೂಪ್ ಡಿ ನೌಕರರು ಜೂನ್ ತಿಂಗಳ ಅಂತ್ಯದೊಳಗೆ ಮಾಹಿತಿ ಸಲ್ಲಿಸುವಂತೆ ತಿಳಿಸಲಾಗಿದೆ. ಸೇವಾವಧಿ ಪೂರೈಸಿರುವ ವೈದ್ಯರು ಹಾಗೂ ಸಿಬ್ಬಂದಿ ಸ್ಥಾನಗಳಿಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.